Coffee

ಅಕಾಲಿಕ ಮಳೆ:ಕಾಫಿ ಬೆಳೆಗಾರರ ಲೆಕ್ಕಾಚಾರ ಅಡಿಮೇಲು

By Kirehalli

January 11, 2024

ಕಳೆದ 5 ದಿನಗಳಿಂದ ಮೋಡದ ವಾತಾವರಣ, ಅಕಾಲಿಕ ಮುಂದುವರಿದಿದ್ದು, ಕಾಫಿ ಬೆಳೆಗೆ ಸಂಕಷ್ಟ ಎದುರಾಗಿದೆ.

ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳಿದೆ.ದೊಡ್ಡ ಪ್ರಮಾಣದಲ್ಲಿ ಹೂವು ಅರಳುತ್ತಿದ್ದು ಮುಂದಿನ 3 ದಿನ ಗಿಡದಲ್ಲಿ ಕಾಫಿ ಕೊಯ್ಲು ನಿಲ್ಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ವರ್ಷ ತಕ್ಕ ಮಟ್ಟಿಗೆ ಕಾಫಿ ಫಸಲು ಚೆನ್ನಾಗಿತ್ತು. ಬೆಲೆ ಕೂಡ ಉತ್ತಮ ಮಟ್ಟದಲ್ಲೇ ಇದೆ.ಆದರೆ,ಕಾಫಿ ಕೊಯ್ಯುವ ವೇಳೆಗೆ ಬಂದ ಮಳೆ ಬೆಳೆಗಾರರ ಲೆಕ್ಕಾಚಾರ ಅಡಿಮೇಲು ಮಾಡಿದೆ.

ಬಿಸಿಲಿನ ಕೊರತೆಯಿಂದ ಕಣದಲ್ಲಿ ಒಣಗಲು ಹರಡಿದ್ದ ಕಾಫಿ ಹಣ್ಣು ಬೂಷ್ಟು ಹಿಡಿದಿದೆ. ಇದರಿಂದ ಕಾಫಿ ಗುಣಮಟ್ಟ ಹಾಳಾಗಿದೆ. 8 ದಿನದಲ್ಲೇ ಒಣಗಬೇಕಿದ್ದ ಕಾಫಿ 12 ದಿನ ಕಳೆದರೂ ಒಣಗುತ್ತಿಲ್ಲ. ಕಣದಲ್ಲಿ ಹರಡಲು ಜಾಗವೂ ಇಲ್ಲದೆ ಬೆಳೆಗಾರರ ಚಿಂತೆ ಹೆಚ್ಚಾಗಿದೆ .

ಮೂರು  ವರ್ಷಗಳಿಂದ ಪ್ರತಿ ವರ್ಷವೂ ಮಳೆಯು ಕಾಫಿ ಕೊಯ್ಲಿಗೆ ಅಡ್ಡಿ ಮಾಡುತ್ತಾ ನಷ್ಟ ತರುತ್ತಿದೆ. ಹವಾಮಾನ ವೈಪರೀತ್ಯದ ಈ ಸಮಸ್ಯೆಗೆ ಯಾವ ಪರಿಹಾರವೂ ಇಲ್ಲ ಎಂದು ಬೆಳೆಗಾರರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.

ಮಳೆಗೆ ಸಿಲುಕಿದ ಕಾಫಿ ಹೆರಕಲು ಕಾರ್ಮಿಕರ ಸಮಸ್ಯೆ ಇದೆ. ಕಾಫಿ ಕೊಯ್ಯುವುದೇ ಹರಸಾಹಸ ಆಗಿರುವಾಗ ನೆಲಕ್ಕೆ ಬಿದ್ದ ಕಾಫಿ ಹೆರಕುವುದು ಅಸಾಧ್ಯ ಎಂದೇ ಬೆಳೆಗಾರರು ಭಾವಿಸಿದ್ದಾರೆ.

ಕಣದಲ್ಲಿ ಬೂಷ್ಟು ತಗುಲಿದ ಕಾಫಿ ಸಿಪ್ಪೆಯ ಸಾಂದ್ರತೆ ಕಡಿಮೆ ಆಗಿ ಚೆರ್ರಿ ಕಾಫಿ ತೂಕದಲ್ಲಿ ಕಡಿಮೆ ಬರುತ್ತದೆ. ಇದರಿಂದ ಶೇ10ರಿಂದ 15ರಷ್ಟು ತೂಕ ಕಡಿಮೆಯಾಗಿ ನಷ್ಟ ಆಗುತ್ತದೆ. ಇದು ಬೆಳೆಗಾರರಿಗೆ ದೊಡ್ಡ ನಷ್ಟ ಎಂದು ಬೆಳೆಗಾರರು ಹೇಳಿದರು.

ಮಳೆಗೆ ಸಿಲುಕಿದ ಕಾಫಿಯನ್ನು ಕ್ಯೂರಿಂಗ್‍ನಲ್ಲಿ ಬೇಳೆ ಮಾಡಿಸಿ ಮಾರಾಟ ಮಾಡಿದರೆ ತಕ್ಕ ಮಟ್ಟಿಗೆ ನಷ್ಟ ಸರಿತೂಗಿಸಬಹುದು.ಆದರೆ, ಸಣ್ಣ ಪ್ರಮಾಣದ ಬೇಳೆಗೆ ಖರೀದಿದಾರರನ್ನು ಹುಡುಕುವುದು ಬೆಳೆಗಾರರಿಗೆ ಸವಾಲು. ಉತ್ತಮ ದರ ಇದ್ದರೂ ಅದು ಬೆಳೆಗಾರರಿಗೆ ಸಿಗದಂತ ಪರಿಸ್ಥಿತಿ ಇದೆ.

ಕಾಫಿ ಕೊಯ್ಲಿಗೆ ಕಾರ್ಮಿಕರಿಲ್ಲದೇ ಪರದಾಟ

ರೋಬಾಸ್ಟಾ ಕಾಫಿ ಕಟಾವಿಗೆ ಸಿದ್ಧವಾಗಿದೆ. ಹಲವೆಡೆ ಕೊಯ್ಲು ಪ್ರಾರಂಭವಾಗಿದೆ. ಈಚೆಗೆ ಮಳೆ ಸುರಿದ ಬಳಿಕ ಏಕಕಾಲದಲ್ಲಿ ಕಾಫಿ  ಹಣ್ಣಾಗತೊಡಗಿದ್ದು, ಕಟಾವು ಮಾಡಲು ಕಾರ್ಮಿಕರಿಲ್ಲದೇ ಪರದಾಡುವಂತಾಗಿದೆ.

ಉತ್ತರ ಕರ್ನಾಟಕದಿಂದ ಪಟ್ಟಣಕ್ಕೆ ಬರುವ ಕಾರ್ಮಿಕರನ್ನು ಕಾಫಿ ಕೊಯ್ಲಿಗಾಗಿ ಬೆಳೆಗಾರರು ಮುಗಿಬಿದ್ದು  ಕರೆದೊಯ್ಯುತ್ತಿದ್ದಾರೆ. ಕಾಫಿ ಬೆಳೆಗಾರ ಅನಿವಾರ್ಯತೆಯನ್ನೇ ಲಾಭ ಮಾಡಿಕೊಳ್ಳುತ್ತಿರುವ ಕೆಲವು ದಲ್ಲಾಳಿಗಳು, ಕಾರ್ಮಿಕರನ್ನು ಕರೆ ತರುವುದಾಗಿ ಮುಂಗಡ ಪಡೆದು ವಂಚಿಸುತ್ತಿದ್ದಾರೆ. ಮುಂಗಡ ಹಣ ನೀಡಿದ ಕಾಫಿ ಬೆಳೆಗಾರರು ಕಾರ್ಮಿಕರ ಬರುವಿಕೆಗಾಗಿ ಎದುರು ನೋಡುವಂತಾಗಿದೆ.

ಕಾಫಿ ಎಸ್ಟೇಟ್‌ಗಳಲ್ಲಿ ನೆಲೆಸಿರುವ ಅಸ್ಸಾಂ ಕಾರ್ಮಿಕರು ಹೆಚ್ಚು ಕೂಲಿ ಆಕರ್ಷಣೆಯಿಂದ ಬೇರೆ ತೋಟಗಳಿಗೆ ರಾತ್ರೋರಾತ್ರಿ ಕೂಲಿ ಪಲಾಯನ ಮಾಡುತ್ತಿದ್ದಾರೆ. ಕಾರ್ಮಿಕರನ್ನು ಕರೆತಂದು ಕಾಫಿಯನ್ನು ಕೊಯ್ಲು ಮಾಡುವುದೇ ಬೆಳೆಗಾರರಿಗೆ ಸವಾಲಾಗಿದೆ.

ನಾಲ್ಕು ದಿನಗಳ ಹಿಂದೆ ಬಂದ ಮಳೆಯು ಕಾಫಿ ಬೆಳೆಗಾರರಿಗೆ ಬಾರಿ ಹೊಡೆತ ನೀಡಿದೆ. ಕಾಫಿ ಹಣ್ಣಾಗಿ ನೆಲಕ್ಕುದುರಿದೆ. ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಗಿಡದಲ್ಲಿ ಕಾಫಿ ಗಿಡಗಳಲ್ಲಿ ಹಣ್ಣುಗಳ ನಡುವೆ ಹೂವು ಅರಳಿವೆ. ಈಗ ಕಾಫಿ ಕೊಯ್ಲು ಮಾಡಿದರೆ ಹೂವು ಸಂಪೂರ್ಣ ನಾಶವಾಗುತ್ತದೆ. ಇದರಿಂದ ಮುಂದಿನ ವರ್ಷದ ಫಸಲು ಕೂಡ ಇಲ್ಲದಂತಾಗುತ್ತದೆ. ದಿಕ್ಕೇ ತೋಚದಂತಾಗಿದೆ ಎನ್ನುತ್ತಾರೆ ಬೆಳೆಗಾರರು.

ಕೊಡಗು:ತೋಟದಲ್ಲಿ ಹೆಜ್ಜೆ ಹಾಕಲು ಮನಸ್ಸೇ ಬರುತ್ತಿಲ್ಲ

ತೋಟದಲ್ಲಿ ಹೆಜ್ಜೆ ಹಾಕಲು ಮನಸ್ಸೇ ಬರುತ್ತಿಲ್ಲ. ಗಿಡಗಳಿಂದ ಹಣ್ಣಾದ ಕಾಫಿ ಬೀಜಗಳು ಉದುರಿ ಬಿದ್ದಿರುವುದನ್ನು ನೋಡಿದರೆ, ಕಣದಲ್ಲಿರುವ ಕಾಫಿ ಕೊಳೆಯುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಇದು ನಾಪೋಕ್ಲು ನಾಲ್ಕುನಾಡಿನ ಕಾಫಿ ಬೆಳೆಗಾರರ ಬಾಯಲ್ಲಿ ಕೇಳಿ ಬರುವ ಮಾತು.

ನಾಲ್ಕುನಾಡು ಮಾತ್ರವಲ್ಲ, ಕೊಡಗು ಜಿಲ್ಲೆಯಾದ್ಯಂತ ಪದೇಪದೇ ಸುರಿಯುತ್ತಿರುವ ಮಳೆಯಿಂದ ಬೆಳೆಗಾರರು ಅತ್ತ ಕೊಯ್ಲು ಮಾಡಲಾಗದೇ, ಇತ್ತ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲಾರದೇ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದ್ದರೂ, ಅದರ ಲಾಭ ಪಡೆಯಲಾರದ ಸ್ಥಿತಿ ಇಲ್ಲಿನ ಬೆಳೆಗಾರರದ್ದಾಗಿದೆ.ದಿನ ಸುರಿಯುವ ಮಳೆಯು ಒಂದೆಡೆ ಕಾಫಿ ಕೊಯ್ಲಿಗೆ ಅಡ್ಡಿಯಾಗಿದೆ. ಹಣ್ಣಾದ ಕಾಫಿ ಮಳೆಯಿಂದಾಗಿ ತೋಟದಲ್ಲಿ ಉದುರಿ ನಷ್ಟ ಸಂಭವಿಸುತ್ತಿದೆ. ಮತ್ತೊಂದೆಡೆ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಿರುವವರು 10ರಿಂದ 15 ದಿನಗಳಿಂದ ಕಣದಲ್ಲಿ ಹರಡಿದ್ದು, ಅದೂ ಸಹ ಮಳೆಯಿಂದಾಗಿ ಕೊಳೆತು ನಷ್ಟ ಉಂಟಾಗುತ್ತಿದೆ.ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಾರರು ತತ್ತರಿಸಿದ್ದಾರೆ.

ಹಣ್ಣಾದ ಕಾಫಿ ಕೊಯ್ಲಿನ ಕೆಲಸ ಒಂದು ಅಥವಾ ಎರಡು ತಿಂಗಳ ಒಳಗೆ ಮುಗಿಯಲೇಬೇಕು. ಇಲ್ಲದಿದ್ದರೆ, ಕಾಫಿ ಹಣ್ಣು ಕಪ್ಪಾಗಿ ಉದುರಲು ತೊಡಗುತ್ತದೆ. ಈಗ ಮಳೆಯಿಂದಾಗಿ ಉದುರುತ್ತಿದೆ. ಜೊತೆಗೆ, ಕಾಫಿ ಹೂ ಬಿಡಲು ಆರಂಭವಾಗಿದೆ. ಕಾಫಿ ಕೆಲಸಕ್ಕೆ ಈ ಸಂದರ್ಭದಲ್ಲಿ ಅಧಿಕ ಕಾರ್ಮಿಕರು ಬೇಕು. ಕಾರ್ಮಿಕರ ಕೊರತೆಯು ಕಾಡುತ್ತಿದ್ದು, ಇರುವ ಕಾರ್ಮಿಕರಿಗೆ ಕೆಲಸ ನೀಡಿ ಕಾಫಿ ಕೊಯ್ಲು ಮಾಡಿಕೊಳ್ಳಲು ಮಳೆ-ಮೋಡ ಅಡ್ಡಿಯಾಗಿದೆ ಎಂದು ನಾಪೋಕ್ಲುವಿನ ಕಾಫಿ ಬೆಳೆಗಾರರ ಒಕ್ಕೂಟದ ಸದಸ್ಯ ಉದಯಶಂಕರ್ ಹೇಳುತ್ತಾರೆ.

ಇರುವ ಕಾಫಿಯನ್ನು ಕೊಯ್ಲು ಮಾಡುವಂತಿಲ್ಲ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸುವಂತಿಲ್ಲ ಇಂಥ ಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ. ಈ ವರ್ಷದ ಇಳುವರಿಯ ಜೊತೆಗೆ ಮುಂದಿನ ವರ್ಷದ ಇಳುವರಿಯ ಮೇಲೂ ಮಳೆ ಮೋಡ ಪರಿಣಾಮ ಬೀರಲಿದೆ. ಕಾಫಿ ಗಿಡಗಳಲ್ಲಿ ಹೂಗಳಿದ್ದು ಕೊಯ್ಲು ಮಾಡಲು ತೊಡಕಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಹೆಚ್ಚು ಕಾರ್ಮಿಕರನ್ನು ತೊಡಗಿಸಿಕೊಂಡು ಬೆಳೆಗಾರರು ಹೆಚ್ಚಿನ ಮುತುವರ್ಜಿ ವಹಿಸಿ ಬೇಗನೇ ಕಾಫಿ ಹಣ್ಣನ್ನು ಕೊಯ್ದುಕೊಳ್ಳಬೇಕು. ಇದರಿಂದ ವೆಚ್ಚ ಅಧಿಕವಾದರೂ ಇದು ಅನಿವಾರ್ಯ. ಹಣ್ಣನ್ನು ಟಾರ್ಪಲಿನ್‌ ಹಾಕಿ ನೀರು ಹೋಗದಂತೆ ಮುಚ್ಚಬೇಕು. – ಡಾ.ವಿ.ಚಂದ್ರಶೇಖರ್ ಕಾಫಿ ಮಂಡಳಿಯ ಉಪನಿರ್ದೇಶಕ ಮಡಿಕೇರಿ.