ಕೊಡಗು,ಸಕಲೇಶಪುರ,ಚಿಕ್ಕಮಗಳೂರಿನಲ್ಲಿ ಹೊಸ ಟ್ರೆಂಡ್‌ ‘ವೀಕೆಂಡ್‌ ವಿತ್‌ ಲ್ಯಾಂಡ್‌’- ಏನಿದು ?

ನಗರದಲ್ಲಿ ಮನೆ ಇದ್ದು,ವಾರಂತ್ಯವನ್ನು ಕಳೆಯಲು ನಿಮಗೆ ಇನ್ನೊಂದು ತೋಟ, ಅದರಲ್ಲಿ ಫಾರ್ಮ್ಹೌಸ್‌ ಬೇಕು. ಈ ಆಸೆಯೇನೋ ಬಹಳ ಸುಂದರ. ಆದರೆ, ಜಮೀನು ಹುಡುಕಿ, ಅದನ್ನು ಕೊಂಡು, ಮನೆ ಕಟ್ಟುವ ಹೊತ್ತಿಗೆ ಆಸೆಯೇ ಕಮರಿಹೋಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ನಾವು ಭೂಮಿ ಕೊಡಿಸ್ತೇವೆ ಅಂತೂ ಮುಂದೆ ಬಂದಿವೆ. ಇಲ್ಲಿ ಮನರಂಜನೆ ಜೊತೆ ಆಸ್ತಿ ಮಾಡುವ ದಾರಿ.

ಮೀನು ಮಾರೋದು ಹಳೆಯ ಟ್ರೆಂಡ್‌.ಇದೇ ಜಮೀನನ್ನು ತುಂಡು ತುಂಡು ಮಾಡಿ ಚದರ ಅಡಿಗೆ ಇಷ್ಟು ಅಂತ ಮಾರಾಟ ಮಾಡುವುದು ಈಗಿನ ಟ್ರೆಂಡ್‌. ಇದಕ್ಕೆ ಫಾರ್ಮ್ ಲ್ಯಾಂಡ್‌ ಅಂತ ಹೆಸರಿಟ್ಟಿದ್ದಾರೆ. ಅದರಲ್ಲೇ ಕಾಫೀ, ಅಡಿಕೆ ಬೆಳೆ ತೆಗೆದು ಕೈಗೆ ರಿಟರ್ನ್ಸ್ ಕೊಡ್ತೀವಿ ಅಂತ ಹೇಳುವ ಕಂಪನಿಗಳೂ ಹುಟ್ಟಿಕೊಂಡಿವೆ. ವೀಕೆಂಡ್‌ ಉತ್ಸವಗಳನ್ನು ಮಾಡುವ ಮಂದಿಯೇ ಇವರ ಗುರಿ.

Also read  Arabica coffee extends losses to 12-year low

ಭೂಮಿಯ ಮೇಲೆ ಹೂಡಿಕೆಯಲ್ಲಿ ನಾನಾ ರೂಪಗಳಿವೆ. ಕೃಷಿ ಮಾಡಲು, ವೀಕೆಂಡ್‌ ಕಳೆಯಲು, ಕೃಷಿ ಮಾಡುತ್ತಲೇ ಡೆವಲಪ್‌ ಆದಾಗ ಸೈಟುಗಳನ್ನು ಮಾಡಲು ಹೀಗೆ… ಇದರಲ್ಲಿ ಮುಖ್ಯವಾಗಿ ವಾರಾಂತ್ಯ ಹೂಡಿಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಎಲ್ಲವೂ ದೀರ್ಘಾವಧಿ ಹೂಡಿಕೆ. ಅದಕ್ಕಾಗಿಯೇ ನಾಡಿನ ಕಾಡಂಚಿನ, ನಗರದ ಹೊರವಲಯದಲ್ಲಿ ಜಮೀನುಗಳಿಗೆ ಒಳ್ಳೇ ಬೆಲೆ ಬಂದಿದೆ. ಹೂಡಿಕೆ ವ್ಯಾಪ್ತಿ ಇಲ್ಲೂ ವಿಸ್ತರಿಸಿದೆ. ಹೊಸಚಿಗುರು, ನಿಖರ, ಭೂಮಿ ಗ್ರೂಪ್‌ ಹೀಗೆ ಒಂದಷ್ಟು ಕಂಪನಿಗಳು ಫಾರ್ಮ್ ಲ್ಯಾಂಡ್‌ ಬಿಕರಿ ಮಾಡಲು ಮುಂದಾಗಿವೆ.
ಕಳೆದ 10 ವರ್ಷಗಳ ಬೆಳವಣಿಗೆ ನೋಡಿದರೆ ಹೆಚ್ಚಾ ಕಡಿಮೆ ಇಡೀ ರಾಜ್ಯದಲ್ಲಿ ಜಮೀನುಗಳ ಬೆಲೆ ಶೇ. 700, 800ರಷ್ಟು ಜಾಸ್ತಿಯಾಗಿದೆ. ಎಕರೆಗೆ 2, 3 ಲಕ್ಷ ಇದ್ದದ್ದು ಈಗ, 10-15 ಲಕ್ಷ ಕ್ಕೆ ಏರಿಕೆಯಾಗಿದೆ. 10 ವರ್ಷಗಳ ಹಿಂದೆ ಎರಡು ಲಕ್ಷ ಹೂಡಿಕೆ ಮಾಡಿ, ಈಗ 15 ಲಕ್ಷ ಪಡೆಯುವುದಾದರೆ ಯಾವ ಷೇರು, ವಿಮಾ ಕಂಪೆನಿ, ಚಿನ್ನ ಕೂಡ ಇಷ್ಟೊಂದು ಮೊತ್ತದ ಲಾಭ ತಂದು ಕೊಡಲಾರದು.

ಕನಕಪುರ, ಕೊಡಗು, ಮೈಸೂರು, ಸಕಲೇಶಪುರ, ಚಿಕ್ಕಮಗಳೂರು ಈ ಕಡೆ ಈಗ ಫಾರ್ಮ್ ಲ್ಯಾಂಡ್‌ ಇನ್ವೆಸ್ಟ್‌ಮೆಂಟ್‌ಗಳು ಜಾಸ್ತಿ ಆಗುತ್ತಿವೆ. ಇತ್ತ ಹೊಸೂರು ಬಳಿ ಕೂಡ ಜಮೀನುಗಳ ಬೆಲೆ ಏರುತ್ತಿದೆ. ಹಳ್ಳಿ ಬಿಟ್ಟವರು ಮತ್ತೆ ರೈತರಾಗಲು, ಪಟ್ಟಣದಲ್ಲಿ ಇದ್ದವರು ಕೃಷಿಕರಾಗುವ ಹಂಬಲ ಹೆಚ್ಚಾಗುತ್ತಿರುವುದರಿಂದ ಇಂಥದ್ದೊಂದು ಟ್ರೆಂಡ್‌ ಹುಟ್ಟಿಕೊಂಡಿದೆ. ಈ ಫಾರ್ಮ್ ಲ್ಯಾಂಡ್‌ನ‌ಲ್ಲೇ ಬೇಕಾದರೆ ಮನೆ ಕೂಡ ಮಾಡಿಕೊಂಡು ವೀಕೆಂಡ್‌ಗಳಲ್ಲಿ ಹೋಗಿ ಇದ್ದು ಬರುವುದು. ಬೇಡ ಎಂದಾಗ ಲ್ಯಾಂಡ್‌ ಮಾರಾಟ ಮಾಡುವುದೂ ದೊಡ್ಡ ಬ್ಯುಸಿನೆಸ್‌.

ಕೇರಳ, ವೈನಾಡ್‌, ಕೊಡಗು, ಗೋವಾಗಳಲ್ಲಿ ಇಂಥ ಹೂಡಿಕೆ ತಾಣಗಳಿವೆ. ನಮ್ಮಲ್ಲಿ ಬಂಡೀಪುರ, ನಾಗರಹೊಳೆಯ ಸುತ್ತಮುತ್ತ ಇಂಥವೇ ತೋಟ, ಹೋಮ್‌ ಸ್ಟೇಗಳಿವೆ. ಚಿಕ್ಕಮಗಳೂರು, ಸಕಲೇಶಪುರ, ಬಾಳ್ಳುಪೇಟೆ, ಕನಕಪುರಗಳಲ್ಲಿ ಎಕರೆಗಟ್ಟಲೆ ತೋಟಗಳನ್ನು ಮಾರುವ ಪರಿಪಾಠವೂ ಇದೆ. ಈಗ ಇದೇ ಜಮೀನನ್ನು ಭಾಗ ಮಾಡಿ ಫಾರ್ಮ್ ಲ್ಯಾಂಡ್‌ ಹೆಸರಲ್ಲಿ ಬಿಕರಿ ಮಾಡುವುದೇ ಹೊಸ ಟ್ರೆಂಡ್‌. ಎರಡು ವರ್ಷಗಳ ಹಿಂದೆ, ಇಲ್ಲೆಲ್ಲಾ ಒಂದು ಎಕರೆಗೆ 5-6ಲಕ್ಷ ಬೆಲೆ ಇತ್ತು. ಈಗ ಎರಡು ಪಟ್ಟು ಏರಿ, ನೇರ ರೈತರಿಂದ ಕೊಂಡರೆ 10-12 ಲಕ್ಷ. ಕಂಪನಿಗಳ ಮುಖಾಂತರ ಕೊಂಡರೆ 25, 30 ಲಕ್ಷ ಬೆಲೆ. ಸಕಲೇಶಪುರ, ಆಚಂಗಿ, ಬೆಳಗೋಡು, ಚಿಕ್ಕಮಗಳೂರು ಕಡೆ ಹತ್ತಾರು ಎಕರೆ ಜಮೀನು ಕೊಂಡು, ಅದನ್ನು ಸುಸ್ಥಿತಿಗೆ ತಂದು. ಬಿಡಿ, ಬಿಡಿಯಾಗಿ ಎಕರೆ ಇಷ್ಟು ಅಂತ ರೇಟು ಇಟ್ಟು ಮಾರುತ್ತಾರೆ. ಇದಕ್ಕಾಗಿಯೇ ಕಂಪೆನಿಗಳು ಹುಟ್ಟಿವೆ.

Also read  Deficient summer rains lift cardamom prices

ಲಾಭ ಹೇಗೆ?
ಒಂದು ಎಕರೆಗೆ 40(40,230 ಚ.ಅಡಿ) ಗುಂಟೆ. ಸೈಟು ಮಾಡಿದರೆ ಇದನ್ನು ಕನ್ವರ್ಷನ್‌ ಮಾಡಿಸಿ, ರಸ್ತೆ, ಪಾರ್ಕ್‌ಗಳಿಗೆ ಶೇ. 40ರಷ್ಟು ಭೂಮಿ ಬಿಟ್ಟುಕೊಟ್ಟು, ಉಳಿದ ಶೇ.60ರಷ್ಟು ಜಾಗದಲ್ಲಿ ಸೈಟು ಮಾಡಬೇಕು. ಅಂದರೆ, ಸರ್ಕಾರದ ಅನುಮೋದನೆ ಪಡೆದರೆ ಎಕರೆಗೆ 18ರಿಂದ 21 ಸೈಟುಗಳನ್ನು ವಿಂಗಡಿಸಬಹುದು. ಇದು ಈ ತನಕ ನಡೆಯುತ್ತಿದ್ದ ವ್ಯವಹಾರ. ಬುದ್ಧಿವಂತಿಕೆಯ ಮುಂದಿನ ಭಾಗ ಎಂದರೆ, ನೀವು ಒಂದು ಎಕರೆ ಜಮೀನಿನಲ್ಲಿ ಶೇ. 15ರಷ್ಟು ರಸ್ತೆ ತೆಗೆದು( 10ಗುಂಟೆ) ಉಳಿದ 30ಗುಂಟೆಯನ್ನು ಅಂದರೆ 32,400 ಚ.ಅಡಿಷ್ಟು ಜಾಗವನ್ನು, ಕನಿಷ್ಠ ಚ.ಅಡಿಗೆ 150ರೂ. ನಂತೆ ಮಾರಿದರೆ ಒಂದು ಎಕರೆಗೆ 48 ಲಕ್ಷದ 68ಸಾವಿರ ರೂ. ಲಾಭ ಸಿಗುತ್ತದೆ. ಅಲ್ಲಿ ಜಮೀನಿಗೆ ಮಾಡುವ ಹೂಡಿಕೆ ಎಷ್ಟು? ಎಕರೆಗೆ 10 ಅಥವಾ 15 ಲಕ್ಷ. ಅಂದರೆ ಲಾಭ ಅದರ ಎರಡು, ಮೂರು ಪಟ್ಟು ಹೆಚ್ಚು. ಈ ಕಾರಣಕ್ಕೆ ಫಾರ್ಮ್ ಲ್ಯಾಂಡ್‌ ಅನ್ನು ಎಕರೆ ಗಟ್ಟಲೆ ಮಾರುವವರೇ, ಚೂರು ಚೂರು ಮಾಡಿ ಮಾರುವುದಕ್ಕೂ ಮುಂದಾಗಿರುವುದು. ಚೂರು ಚೂರು ಎಂದರೆ ಹೇಗೆ? ನೀವು ಕನಿಷ್ಠ 5 ಸಾವಿರ ಚ.ಅಡಿ ಕೊಳ್ಳಲೇಬೇಕು. ಗರಿಷ್ಠ 15-20 ಸಾವಿರ ಚ.ಅಡಿತನಕ ಇದೆ. ಸಣ್ಣ ಸಣ್ಣ ಕಂಪನಿಗಳು ಎರಡು, ಮೂರು ಸಾವಿರ ಚ.ಅಡಿ ಕೂಡ ಮಾರುತ್ತವೆ. ಈ ರೀತಿ ತುಂಡು ಭೂಮಿಯ ಮಾರುವಿಕೆಯಲ್ಲಿ ಕ್ಲಬ್‌ ಹೌಸ್‌ಗಳನ್ನು ಮಾಡಿರುತ್ತಾರೆ. ಅದಕ್ಕೆ ಪ್ರತ್ಯೇಕ ಶುಲ್ಕ. ಕಂಪನಿಗಳಿಂದ ಈ ರೀತಿ ಚ.ಅಡಿ ಲೆಕ್ಕದಲ್ಲಿ ಭೂಮಿ ಕೊಂಡರೆ, ಅದನ್ನು ಕಾಯುವ, ರಕ್ಷಿಸುವ, ಒತ್ತುವರಿ ಸಮಸ್ಯೆ ಇರುವುದಿಲ್ಲ. ಎಲ್ಲವೂ ಅವರೇ ನೋಡಿಕೊಳ್ಳುತ್ತಾರೆ. ಆಗಾಗ ಹೋಗಿ ನೋಡಿಕೊಂಡು ಬರಬಹುದು. ಕೆಲವು ಕಂಪೆನಿಗಳು ಮನೆ ಕೂಡ ಕಟ್ಟಿಕೊಡುತ್ತಾರೆ. ಹೀಗೆ ಜಮೀನು ಖರೀದಿಸಿದರೆ, ವೀಕೆಂಡ್‌ ಅನ್ನು ಯಾವುದೋ ರೆಸಾರ್ಟ್‌ಗಳಲ್ಲಿ ಕಳೆಯುವ ಬದಲು ಹೂಡಿಕೆ ಮಾಡಿದ ಸ್ವಂತ ಜಮೀನಿನಲ್ಲೇ ಪಾರ್ಟಿ ಮಾಡಬಹುದಲ್ಲ? ಅನ್ನೋದು ಗ್ರಾಹಕರ ಲೆಕ್ಕಾಚಾರ.

Also read  Black Pepper Spot Prices 24-Dec-18

ಇಷ್ಟು ಲಾಭ ಸಿಗಲ್ಲ
ಕೆಲ ಕಂಪೆನಿಗಳು ನಾನಾ ರೀತಿಯ ಆಮಿಷ ಒಡ್ಡುತ್ತವೆ. ನೀವು ಕಾಫೀತೋಟದ ಮಾಲೀಕರಾಗಿ ವರ್ಷಕ್ಕೆ ಒಂದ ಲಕ್ಷ ಆದಾಯ ಪಡೆಯಿರಿ ಅಂತ ಹೇಳುತ್ತದೆಯಾದರೂ, ಅದನ್ನು ನಂಬಲು ಆಗದು. ನಂಬಿದರೂ ವರ್ಷಕ್ಕೆ ನಿಖರವಾಗಿ ಲಕ್ಷ ರೂ. ಆದಾಯ ಬರುತ್ತದೆ ಅಂತ ಹೇಳಲಾಗದು. ಆದರೆ ಈ ರೀತಿ ನೀವು ಹೂಡಿಕೆ ಮಾಡಿದ ಭೂಮಿಯ ಬೆಲೆ ಎರಡು, ಮೂರು ವರ್ಷಕ್ಕೆ ಶೇ. 20-30ರಷ್ಟು ಏರಿಕೆ ಕಾಣುತ್ತದೆ ಅಂತ ಹೇಳುತ್ತವೆ. ಆದರೆ, ಈ ನೋಟು ಅಮಾನ್ಯಿàಕರಣದ ನಂತರ ಜಮೀನುಗಳ ಬೆಲೆ ಏರುತ್ತಿಲ್ಲ. ಈ ಮೊದಲು ಮಾರುಕಟ್ಟೆ ಬೆಲೆಗೂ, ಸರ್ಕಾರದ ನಿರ್ದೇಶಿತ ಬೆಲೆಗೂ ಕನಿಷ್ಠ ಶೇ.200ರಷ್ಟಾದರೂ ಅಂತರ ಇರುತ್ತಿತ್ತು. ಈಗ ಹೆಚ್ಚು ಕಮ್ಮಿ ಎರಡೂ ಸಮಸಮವಾಗಿದೆ.

ಕಳೆದ ಐದು ವರ್ಷದಲ್ಲಿ ಇಂಥ ಕಂಪೆನಿಗಳು ಹೆಚ್ಚಿವೆ. ಸುಮ್ಮನೆ ಲೆಕ್ಕ ಹಾಕಿದರೆ, ವಾರ್ಷಿಕವಾಗಿ ಭೂಮಿ ಬೆಲೆ ಕನಿಷ್ಠ ಶೇ. 10ರಷ್ಟು ಹೆಚ್ಚುತ್ತಿರುವುದರಿಂದ ಲಾಸ್‌ ಆಗೋಲ್ಲ. ಅಂದರೆ, ಎಕರೆಗೆ 10ಲಕ್ಷ ಹೂಡಿಕೆ ಮಾಡಿದರೆ ಮುಂದಿನ ವರ್ಷದ ಹೊತ್ತಿಗೆ ಒಂದು ಲಕ್ಷ ಏರಿರುತ್ತದೆ. ಭಾರೀ ಮೊತ್ತದ ಹಣವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್‌ ಇಟ್ಟರೂ, ಇಷ್ಟು ಬಡ್ಡಿ ಸಿಗುವುದು ಅನುಮಾನ. ನೀವು ಪ್ರತ್ಯೇಕವಾಗಿ ಜಮೀನು ಖರೀದಿ ಮಾಡುವುದಾದರೆ ಕೊಂಚ ಶ್ರಮ ಹಾಕಬೇಕು. ಆಗ ಎಕರೆಗೆ 8-10 ಲಕ್ಷ ಸಿಗುತ್ತದೆ. ಆದರೆ ನಿರ್ವಹಣೆ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಕಂಪೆನಿಗಳು ಇವನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡೇ ಬೆಲೆ ನಿಗದಿ ಮಾಡುತ್ತದೆ. ಸಕಲೇಶಪುರ, ಚಿಕ್ಕಮಗಳೂರು, ಮೈಸೂರು, ಕೊಡಗಿನ ಸುತ್ತಮುತ್ತ ಕೂಡ ಹೂಡಿಕೆ ಹೆಚ್ಚಿದೆ. ಸಕಲೇಶಪುರದಲ್ಲೇ ಭೂಮಿ ಚೂರು ಚೂರು ಮಾಡಿ ಮಾರಲು ನಿಖರ, ಫಾರ್ಮವಿಲ್ಲಾ ಕಂಪೆನಿಗಳು ತಲೆ ಎತ್ತಿವೆ.

ತಿಪ್ಪಗೊಂಡನಹಳ್ಳಿ, ಮಾಗಡಿ, ಮದ್ದೂರು, ರಾಮನಗರ ಸುತ್ತುಮುತ್ತಲ 10-15 ಕಿ.ಮೀ, ತುಮಕೂರು, ಶಿರಾ, ತಿಪಟೂರುಗಳ ಕಡೆ ಜಮೀನಿಗೆ ಡಿಮ್ಯಾಂಡ್‌ ಹೆಚ್ಚಿದೆ. ಐದು ವರ್ಷದ ಹಿಂದೆ ತಿಪ್ಪಗೊಂಡನಹಳ್ಳಿಯ ಸುತ್ತಮುತ್ತ ಎಕರೆಗೆ 10,12ಲಕ್ಷ ಇತ್ತು. ಈಗ 30 ಲಕ್ಷ ದಾಟಿದೆ. ಇತ್ತ ಚಿಕ್ಕಬಳ್ಳಾಪುರ, ನಂದಿ ಬೆಟ್ಟ, ಬಾಗೇಪಲ್ಲಿ, ಚೇಳೂರು ಇಲ್ಲೆಲ್ಲಾ ಎಕರೆ ಜಮೀನಿನ ಬೆಲೆ 40ಲಕ್ಷ ದಿಂದ ಎರಡು, ಮೂರು ಕೋಟಿ ಮುಟ್ಟಿದೆ. ಇದಕ್ಕೂ ಈ ವೀಕೆಂಡ್‌ ತೋಟಗಳು, ರಿಯಲ್‌ ಎಸ್ಟೇಟೇನ ಹೂಡಿಕೆಯೇ ಕಾರಣ. ಬಾಗೇಪಲ್ಲಿಯಲ್ಲಿ ಸಾಧಲಿ, ದಿಬ್ಬೂರಳ್ಳಿ, ದಡಂಘಟ್ಟ, ಪಾತಪಾಳ್ಯ ಚಿಂತಾಮಣಿಗೆ ಹೊಂದಿಕೊಂಡಿರುವ ಹಳ್ಳಿಗಳಲ್ಲೂ ಬೆಲೆ ಎಕರೆಗೆ 15-20 ಲಕ್ಷ ಆಗಿದೆ. ಜಮೀನು ಕೊಳ್ಳುವುದು ಕೃಷಿ ಮಾಡುವುದು ಈಗ ಹೊಸ ಪ್ಯಾಷನ್‌ ಆಗಿರುವುದರಿಂದ ಬೆಲೆಗಳು ಏರುತ್ತಿವೆ. ಹೂಡಿಕೆ ಮಾಡುವವರನ್ನೂ ಆಕರ್ಷಿಸುತ್ತಿವೆ.

Also read  ಇನ್ನೂ ಮುಂದೆ ಕಾಫೀ ಕುಡಿದು ಓಡಾಡ್ತವಂತೆ ಬಸ್ಸುಗಳು

ಕೊಳ್ಳುವ ಮೊದಲು
-ನೀವು ಕೊಳ್ಳುವ ಫಾರ್ಮ್ ಲ್ಯಾಂಡ್‌/ಜಮೀನು ನೀವು ವಾಸಿಸುವ ಸ್ಥಳದಿಂದ 3-4 ಗಂಟೆ ಪ್ರಯಾಣ ಮಾಡುವಂತಿರಲಿ. – ಪಟ್ಟಣ ಪ್ರದೇಶಕ್ಕೂ, ಜಮೀನಿಗೂ, ಸರಾಗವಾಗಿ ಓಡಾಡುವಂತೆ ಇರಲಿ.
– ಭೂಮಿಯ 50 ವರ್ಷದ ದಾಖಲೆಗಳನ್ನು ಪರಿಶೀಲಿಸಿ. ಮದರ್‌ಡೀಡ್‌ನಿಂದ ಪ್ರಸ್ತುತ ಇರುವ ಮಾಲೀಕರು ಕಾನೂನು ಬದ್ಧವಾಗಿಯೇ ಅನುಭವದಲ್ಲಿ ಇದ್ದಾರೆಯೇ ಗಮನಿಸಿ.
– ಕೊಳ್ಳುವ ಮೊದಲು ಸಾರ್ವಜನಿಕ ನೋಟೀಸ್‌ ಕೊಟ್ಟರೆ ಒಳ್ಳೆಯದು. ಒಂದು ಪಕ್ಷ ಇಬ್ಬರಿಗೆ ಒಂದೇ ಭೂಮಿ ಮಾರಿದ್ದರೆ ಇದು ನೆರವಿಗೆ ಬಂದೀತು.
– ಭೂಮಿ ಕೊಂಡಾಕ್ಷಣ ಅದರಲ್ಲಿ ಕೃಷಿ ಮಾಡುವ ಹವ್ಯಾಸ ರೂಢಿಸಿಕೊಳ್ಳಿ. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಹಾಕಿ. ಕಾಫಿ, ಅಡಿಕೆಯಿಂದ ಲಾಭ ಸಿಗುತ್ತದೆ.
– ಕಂಪನಿಗಳ ಮೂಲಕ ಕೊಳ್ಳುವುದಾದರೆ, ಜಮೀನಿನ ಮೂಲ ಮಾಲೀಕ ಹಾಗೂ ಕಂಪನಿಯ ನಡುವೆ ಆಗಿರುವ ಕರಾರು ಏನು ಎನ್ನುವುದನ್ನು ತಿಳಿದುಕೊಳ್ಳಿ.
– ಕಂಪನಿ ಮೂಲ ಭೂ ಮಾಲೀಕರಿಂದ ಯಾವ ಸರ್ವೇ ನಂಬರ್‌ನ, ಎಷ್ಟು ಎಕರೆ ಜಮೀನನ್ನು ಅಗ್ರಿಮೆಂಟ್‌ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಪಡೆಯಿರಿ.
– ಕಂಪನಿ ನಿಮಗೆ ಮಾರಾಟ ಮಾಡುವಾಗ ಹಾಕುವ ನಿಬಂಧನೆಗಳನ್ನು ಸರಿಯಾಗಿ ಓದಿ, ಜೀರ್ಣಿಸಿಕೊಳ್ಳಿಸಿ.
– ನೀವು ಕೊಳ್ಳುವ ಭೂಮಿಯ ಸುತ್ತಮುತ್ತ ಸರ್ಕಾರಿ ಯೋಜನೆಗಳು ಜಾರಿಯಾಗುತ್ತಿವೆಯೇ, ಆಗಿವೆ ಎಂದಾದರೆ, ಅದರಿಂದ ಆಗುವ ಲಾಭ, ನಷ್ಟವನ್ನು ಲೆಕ್ಕ ಹಾಕಿ.

Also read  Coffee Prices (Karnataka) on 27-04-2018