ರಾಜ್ಯದಲ್ಲಿ ಮುಂದಿನ ಮೂರು ನಾಲ್ಕು ದಿನ ಭಾರಿ ಮಳೆ-ರೆಡ್‌ ಅಲರ್ಟ್‌

ರಾಜ್ಯದ ಎಲ್ಲ ಭಾಗಗಳಲ್ಲೂ ಮುಂಗಾರು ಚುರುಕಾಗಿದ್ದು,ಕರಾವಳಿಯ ಎಲ್ಲ ಜಿಲ್ಲೆಗಳು,ಕೊಡಗು,ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆ.8 ಹಾಗೂ 9ರಂದು ಭಾರಿ ಮಳೆಯ (ರೆಡ್‌ ಅಲರ್ಟ್‌) ಎಚ್ಚರಿಕೆ ನೀಡಲಾಗಿದೆ.

ಅರಬ್ಬೀ ಸಮುದ್ರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಮಳೆಯ ಮಾರುತಗಳು ಚಲಿಸುತ್ತಿದ್ದು ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್‌ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

Also read  Commerce Ministry assures action to help the pepper growers soon

ಆಗಸ್ಟ್ 7ರಿಂದ ಆಗಸ್ಟ್ 9ರ ವರೆಗೆ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ, ಮುಂದಿನ ಮೂರು ನಾಲ್ಕು ದಿನಗಳಲ್ಲಿ 204 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರೊಂದಿಗೆ ಅಲೆಗಳಬ್ಬರ ಜೋರಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕಿಳಿಯಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮುಂಗಾರು ಚುರುಕಾಗಿದೆ.ರಾಜ್ಯದ ಬಹುತೇಕ ಭಾಗಗಳಲ್ಲಿ ಮೂರು ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ,ಉಡುಪಿ,ಕೊಡಗು,ಚಿಕ್ಕಮಗಳೂರು,ಸಕಲೇಶಪುರ,ಬಾಗಲಕೋಟ ಜಿಲ್ಲೆಯ ಅಂಗನವಾಡಿ,ಶಾಲಾ,ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

Also read  ಕಾಫಿ ಬೋರ್ಡಿನ ಅಧ್ಯಕ್ಷನಾದ ಬೆಳೆಗಾರ

ಇದೇ ವೇಳೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು ಜಿಲ್ಲಾಡಳಿತ 24×7 ಕಂಟ್ರೋಲ್ ರೂಮ್‍ನ ದೂರವಾಣಿ ಸಂಖ್ಯೆ 08272-221077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Also read  Very heavy rains from 7 June: 3 Coastal districts alerted