ಟೊಮೆಟೊ ಬೆಳೆದು 4 ತಿಂಗಳುಗಳಲ್ಲಿ 6 ಲಕ್ಷ ಲಾಭಗಳಿಸಿದ ಯುವ ರೈತ

ನಿಪ್ಪಾಣಿ ತಾಲ್ಲೂಕಿನ ಗಳತಗಾ ಗ್ರಾಮದ ಯುವ ರೈತ ಬಿ.ಕಾಂ. ಪದವೀಧರ ಶಿವಾನಂದ ಹೂವಗೌಡ ಪಾಟೀಲ ಎಂಬುವವ ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

90 ಗುಂಟೆ ಜಮೀನಿನಲ್ಲಿ ಸಿಜೆಂಟಾ 6242 ತಳಿಯ ಟೊಮೆಟೊ ಬೆಳೆದು 4 ತಿಂಗಳುಗಳ ಅವಧಿಯಲ್ಲಿ ಖರ್ಚು–ವೆಚ್ಚ ಕಳೆದ ₹ 6 ಲಕ್ಷ ಆದಾಯ ಗಳಿಸಿ ಗಮನಸೆಳೆದಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.

ನಾಲ್ಕೂವರೆ ಅಡಿ ಅಂತರದ ಸಾಲುಗಳಲ್ಲಿ ಜ. 10ರಂದು ಟೊಮೆಟೊ ಸಸಿಗಳ ನಾಟಿ ಮಾಡಿದ್ದ ಅವರು, ಹನಿ ನೀರಾವರಿ ಮೂಲಕ ನೀರು ಕೊಟ್ಟಿದ್ದಾರೆ. ಎರಡು ತಿಂಗಳ ಬಳಿಕ ಟೊಮೆಟೊ ಕಾಯಿಗಳಾಗಲು ಶುರುವಾದವು. ಕಟಾವು ಆರಂಭಗೊಂಡಿದ್ದು, ಮಾರ್ಚ್ 2ನೇ ವಾರದಿಂದ. ಇದುವರೆಗೆ 137 ಟನ್ ಇಳುವರಿ ಪಡೆದಿದ್ದಾರೆ. ಪ್ರತಿ ಕೆ.ಜಿ. ಟೊಮೆಟೊಗೆ ಸಗಟು ಮಾರುಕಟ್ಟೆಯಲ್ಲಿ ಸರಾಸರಿ ₹ 8ರಿಂದ ₹ 15 ದರ ಲಭಿಸಿದ್ದು, ₹ 11.80 ಲಕ್ಷ ವರಮಾನ ಪಡೆದಿದ್ದಾರೆ. ಗೋವಾ ಮತ್ತು ಬೆಂಗಳೂರು ಮಾರುಕಟ್ಟೆಗೆ ಇವರು ಟೊಮೆಟೊ ಕಳುಹಿಸಿದ್ದಾರೆ.
ಫಿನೋಲೆಕ್ಸ್‌ ಡ್ರಿಪ್‌ ಇರಿಗೇಷನ್ ವಿತರಕರೂ ಆಗಿರುವ ಶಿವಾನಂದ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಏಳು ವರ್ಷಗಳಿಂದ ಟೊಮೆಟೊ ಸೇರಿದಂತೆ ಇತರ ತರಕಾರಿ ಬೆಳೆಗಳನ್ನು ಬೆಳೆದು ಲಾಭ ಕಾಣುತ್ತಿದ್ದಾರೆ.

‘ಏಳು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದೇನೆ. ಪ್ರಸಕ್ತ ವರ್ಷವೂ ಜನವರಿಯಲ್ಲಿ ನಾಟಿ ಮಾಡಿದ್ದು, ನಾಲ್ಕು ತಿಂಗಳ ಅವಧಿಯಲ್ಲಿ ಬೆಳೆಯಿಂದ ₹ 11.80 ಲಕ್ಷ ಆದಾಯ ಬಂದಿದೆ. ₹ 5 ಲಕ್ಷ ಖರ್ಚು–ವೆಚ್ಚವಾಗಿದೆ. ಸಸಿಗಳ ನಾಟಿ ಹಾಗೂ ಗೊಬ್ಬರಕ್ಕಾಗಿ ₹ 1.30 ಲಕ್ಷ, ₹ 80ಸಾವಿರ ಖರ್ಚಿನಲ್ಲಿ ಔಷಧೋಪಚಾರ, ₹ 30ಸಾವಿರದಲ್ಲಿ ಟೊಮೆಟೊ ಗಿಡಗಳನ್ನು ತಂತಿಗೆ ಕಟ್ಟಲು ಸುತಲಿ ದಾರ ಖರೀದಿ ಹಾಗೂ ಕೂಲಿ  ಕಾರ್ಮಿಕರ ಸಂಬಳ, ಇತರ ಖರ್ಚು ₹ 2.50 ಲಕ್ಷ ವೆಚ್ಚವಾಗಿದೆ. ಗೋವಾ ಮತ್ತು ಬೆಂಗಳೂರಿನ ವರ್ತಕರು ನೇರವಾಗಿ ಜಮೀನಿಗೆ ಬಂದು ಟೊಮೆಟೊ ಖರೀದಿಸಿಕೊಂಡು ಹೋಗುತ್ತಾರೆ. ನಾವು ಕಟಾವು ಮಾಡಿ ಕೊಡಬೇಕಷ್ಟೇ. ಋತುಮಾನಕ್ಕೆ ತಕ್ಕಂತೆ, ಯೋಜನಾಬದ್ಧವಾಗಿ ಕೃಷಿ ಕೈಗೊಂಡರೆ ಹೆಚ್ಚಿನ ಲಾಭ ಪಡೆಯಬಹುದು’ ಎಂದು ಅನುಭವ ಹಂಚಿಕೊಂಡರು.

ಅವರ ಸಂಪರ್ಕಕ್ಕೆ ಮೊ: 9632556555.

ಸುದ್ದಿ:ಪ್ರಜಾವಾಣಿ

Also read  Vietnam pepper industry faces oversupply and quality problems