ವಿಯೆಟ್ನಾಮ್ನಲ್ಲಿ ಕಾಫಿ ಮತ್ತು ಕಾಳುಮೆಣಸು ಕೃಷಿ

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಶನ್(ಕೆ.ಎ.ಪಿ) ವತಿಯಿಂದ ವಿಯೆಟ್ನಾಮ್ ದೇಶಕ್ಕೆ ಅಧ್ಯಯನ ಪ್ರವಾಸ ಹೋಗಿ ಬಂದಿರುವ ಹಳೆಕೋಟೆ ಎನ್.ರಮೇಶ್ ರವರು ಆ ಸಂದರ್ಭದಲ್ಲಿ ಅಲ್ಲಿ ಕಂಡ ಅನೇಕ ಕೃಷಿ ಸಂಬಂಧಿತ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕಾಫಿ,ಕಾಳುಮೆಣಸು ಕೃಷಿಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುತ್ತಿರುವ ವಿಯೆಟ್ನಾಮ್ ವಿಶ್ವದ ಪ್ರಮುಖ ಕಾಫೀ ಬೆಳೆಯುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಭೌಗೋಳಿಕವಾಗಿ ನಮ್ಮ ಮಲೆನಾಡು ಪ್ರದೇಶವನ್ನು ಹೋಲುವ ಹವಾಮಾನ ವಿಯೆಟ್ನಾಮಿನ ಕಾಫೀ ಬೆಳೆಯುವ ಪ್ರದೇಶಗಳಲ್ಲಿ ಇದ್ದರೂ ಅಲ್ಲಿ ಬಹುತೇಕ ಸಮತಟ್ಟಾದ ಭೂಪ್ರದೇಶವೇ ಇದೆ. ವಾರ್ಷಿಕ ೮೦ರಿಂದ ೧೨೦ ಇಂಚು ಮಳೆ ಬೀಳುವ ಈ ಪ್ರದೇಶದ ಮಟ್ಟ ಭಾಗಗಳಲ್ಲಿ ರೋಬಸ್ಟಾ ಕಾಫೀ ಫಲವತ್ತಾಗಿ ಬೆಳೆಯುತ್ತದೆ. ವಿಯೆಟ್ನಾಮಿನ ಮಧ್ಯಭಾಗ ಮತ್ತು ಉತ್ತರ ಭಾಗಗಳು ಇಳಿಜಾರು ಮತ್ತು ತೀವ್ರ ಇಳಿಜಾರು ಪ್ರದೇಶಗಳನ್ನು ಹೊಂದಿದ್ದು ಅಲ್ಲಿ ಅರೇಬಿಕಾ ತಳಿಯ ಕಾಫೀ ಪ್ಲಾಂಟೇಶನ್ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾಮಾನ್ಯವಾಗಿ ನಮ್ಮಲ್ಲಿನಂತೆಯೇ ಏಪ್ರಿಲ್ ತಿಂಗಳಿಂದ ಆರಂಭವಾಗುವ ಮುಂಗಾರು ಮಳೆ ಅಕ್ಟೋಬರ್ ತನಕವೂ ಬಿಟ್ಟು ಬಿಟ್ಟು ಸುರಿಯುತ್ತಲೇ ಇರುತ್ತದೆ. ನವೆಂಬರ್ನಿಂದ ಮಾರ್ಚ್ ತಿಂಗಳ ತನಕದ ಉಷ್ಣಾಂಶ ೧೫ರಿಂದ ೨೪ ಡಿಗ್ರಿಯಷ್ಟಿರುತ್ತದೆ. ವಿಯೆಟ್ನಾಮೀ ಭಾಷೆಯನ್ನಾಡುವ ಅಲ್ಲಿನ ಜನ ದೇಹಾಕೃತಿಯಲ್ಲಿ ಕೊಂಚ ಕುಳ್ಳರು. ಆದರೆ ಶ್ರಮದ ಕೆಲಸವನ್ನು ನಿರ್ವಹಿಸುವಲ್ಲಿ ನಿಸ್ಸೀಮರು.

ಕಾಫಿ ಬೆಳೆಯ ಉಗಮ

ಫ್ರೆಂಚರ ಆಳ್ವಿಕೆಯ ಕಾಲದಲ್ಲಿಯೇ ಕಾಫೀಗಿಡಗಳನ್ನು ನೆಟ್ಟು ದೊಡ್ಡ ಪ್ರಮಾಣದಲ್ಲಿ ತೋಟಗಳನ್ನು ಮಾಡುವ ಮೂಲಕ ವಿಯೆಟ್ನಾಮಿಗೆ ಕಾಫೀ ಬೆಳೆ ಪರಿಚಿತವಾಯಿತು. ಇದೀಗ ಐದುಲಕ್ಷ ಹೆಕ್ಟೇರ್ಗಳಲ್ಲಿ ಕಾಫೀ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿ ವಿಶ್ವನಕಾಶೆಯಲ್ಲಿ ಗುರುತಿಸಲ್ಪಟ್ಟಿದೆ. ಜೊತೆಜೊತೆಗೆ ಕಾಳುಮೆಣಸು ಕೃಷಿಯನ್ನೂ ಸಹ ಅವರು ಅಳವಡಿಸಿಕೊಂಡು ಆರ್ಥಿಕ ಸಬಲತೆಯನ್ನು ಕಂಡುಕೊಂಡಿದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆಯನ್ನು ಸಾಧಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

Also read  "ಕಾಫಿ ಸಂಭ್ರಮ" - ಇದು ಕಾಫಿ ಉದ್ಯಮದ ಸಂಕಷ್ಟಕೆ ಮಹಿಳಾ ಬೆಳೆಗಾರರು ಕಂಡುಕೊಂಡ ಮಾರ್ಗ

ಬೆಳೆಗಾರರು ಯಾರು?

ನಮ್ಮ ದೇಶದಲ್ಲಿರುವಂತೆ ವೈಯಕ್ತಿಕ ಒಡೆತನದ ಹಿಡುವಳಿಗಳು ಅಲ್ಲಿಲ್ಲ. ಅದು ಕಮ್ಯುನಿಷ್ಟ್ ರಾಷ್ಟ್ರ. ಇಲ್ಲಿರುವ ಬಹುತೇಕ ಕಾಫೀ ಬೆಳೆ ಕಂಪೆನಿ ತೋಟಗಳ ಆಡಳಿತಕ್ಕೆ ಒಳಪಟ್ಟಿದೆ. ಸರಕಾರದಿಂದ ನಿಯಂತ್ರಿಸಲ್ಪಟ್ಟ ಭೂನಿಗಮವು ಭೂಮಿಯನ್ನು ವ್ಯಕ್ತಿಗತ ರೈತನಿಗೆ ಮಂಜೂರು ಮಾಡುತ್ತದೆ. ಆದರೆ ಭೂಮಿಯ ಒಡೆತನ ರೈತನಿಗೆ ಇರುವುದಿಲ್ಲ. ಒಡೆತನ ಸರಕಾರದ್ದೇ ಆಗಿರುತ್ತದೆ. ಕಾಫೀ ಕಂಪೆನಿಗಳು ಸಹ ಸುಮಾರು ೨೫ ಕಾಫೀ ಬೆಳೆಗಾರರ ಸಂಯುಕ್ತ ಮಾಲೀಕತ್ವದಲ್ಲಿ ನಡೆಯುತ್ತವೆ. ಅಲ್ಲಿ ಸುಮಾರು ೭೦ ದೊಡ್ಡ ಕಾಫೀ ಕಂಪೆನಿಗಳಿವೆ. ಉಳಿದಂತೆ ಸಣ್ಣ ಸಣ್ಣ ಹಿಡುವಳಿದಾರರೂ ಗಣನೀಯ ಪ್ರಮಾಣದಲ್ಲಿ ಅಂದರೆ ಸರಿಸುಮಾರು ಮೂರುವರೆ ಲಕ್ಷದಷ್ಟಿದ್ದಾರೆ. ಸರಕಾರದಿಂದ ನೇಮಕವಾದ ಭೂನಿಗಮ ರೈತರಿಗೆ ಆರ್ಥಿಕ ಸಹಾಯವನ್ನು ಕೊಡುತ್ತದೆ. ಆದರೆ ಬೆಳೆಗಾರ ತಾನು ಬೆಳೆದ ಕಾಫೀಯನ್ನು ಆಯಾ ಭೂನಿಗಮಕ್ಕೆ ಮಾರಬೇಕೇ ವಿನಹಾ ಬೇರೆಲ್ಲಿಯೂ ಮಾರುವಂತಿಲ್ಲ. ಭೂನಿಗಮ ನಿರ್ಧರಿಸುವ ಬೆಲೆಯೇ ಅಂತಿಮ. ಬೆಳೆಯನ್ನು ವಾರ್ಷಿಕವಾಗಿ ಪಡೆಯುವಾಗ ತಾನು ಕೊಟ್ಟ ಮುಂಗಡ ಹಣವನ್ನು ಕಟಾಯಿಸಿಕೊಂಡು ಉಳಿಕೆ ಹಣವನ್ನು ನಿಗಮ ಆಯಾ ಬೆಳೆಗಾರನಿಗೆ ಕೊಡುತ್ತದೆ.

Also read  ಕಾಡುಪ್ರಾಣಿಗಳಿಗಾಗಿ ಕೆರೆ ಕಟ್ಟಿದ ಕೊಡಗಿನ ಕಾಫಿ ಬೆಳೆಗಾರ

 ಕಾಫಿ ಕೃಷಿಯ ಕ್ರಮ ಹೇಗಿದೆ?

ಕಾಫೀ ತೋಟಗಳಿಗೆ ನೀರು ಹಾಯಿಸುವ ಪದ್ಧತಿ ಅಲ್ಲಿ ಜಾರಿಯಲ್ಲಿದೆ. ದೊಡ್ಡ ದೊಡ್ಡ ಕಂಪೆನಿ ತೋಟಗಳು ತಮ್ಮದೇ ಆದ ನೀರು ಶೇಖರಣಾ ಅಣೆಕಟ್ಟೆಗಳನ್ನು ಹೊಂದಿದ್ದರೆ ಸಣ್ಣ ಹಿಡುವಳಿದಾರರು, ತೆರೆದ ಬಾವಿಯ ನೀರನ್ನು ತೋಟಗಳಿಗೆ ಹರಿಸುತ್ತಾರೆ. ಅಲ್ಲಿನ ಕಾಫೀ ಗಿಡಗಳಿಗೆ ಕಾಂಪೋಸ್ಟ್ ಗೊಬ್ಬರದ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಮೂರು ವರುಷಕ್ಕೆ ಒಮ್ಮೆ ಹೆಕ್ಟೇರು ಒಂದಕ್ಕೆ ಸುಮಾರು ಹತ್ತು ಟನ್ಗಳಷ್ಟು ಕಾಂಪೋಸ್ಟ್ ಗೊಬ್ಬರದ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ. ಮೂರು ವರುಷಕ್ಕೆ ಒಮ್ಮೆ ಹೆಕ್ಟೇರು ಒಂದಕ್ಕೆ ಸುಮಾರು ಹತ್ತು ಟನ್ಗಳಷ್ಟು ಕಾಂಪೋಸ್ಟ್ ಗೊಬ್ಬರ ಹಾಕಲಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆಯು ಕಾಫೀ ಗಿಡಗಳಿಗೆ ಎರಡನೇ ಸುತ್ತಿನ ನೀರಾವರಿ ಪೂರೈಕೆಯ ನಂತರ ೪ ಹಂತಗಳಲ್ಲಿ ನಡೆಯುತ್ತದೆ. ಮಾರ್ಚ್ ತಿಂಗಳಲ್ಲಿ ಹೆಕ್ಟೇರ್ಗೆ ನೂರು ಕೆಜಿ ಅಮೋನಿಯಂ ಸಲ್ಫೇಟ್ ನೀಡಲಾಗುತ್ತದೆ. ಮೇ ತಿಂಗಳಲ್ಲಿ ಮತ್ತೆ ಹೆಕ್ಟೇರ್ಗೆ ೨೦೦ ಕೆಜಿ ಯೂರಿಯಾ, ೭೦೦ ಕೆಜಿ ಟೆಕ್ನೋಫಾಸ್ ಮತ್ತು ೧೫೦ ಕೆಜಿ ಮ್ಯೂರೇಟ್ ಆಫ್ ಪೊಟಾಷ್ ನೀಡಲಾಗುತ್ತದೆ. ಮುಂದುವರಿದು ಮತ್ತೆ ಜುಲೈ ತಿಂಗಳಲ್ಲಿ ಹೆಕ್ಟೇರ್ಗೆ ೨೦೦ ಕೆಜಿ ಯೂರಿಯಾ ಮತ್ತು ೧೫೦ ಕೆಜಿ ಮ್ಯೂರೇಟ್ ಆಫ್ ಪೊಟಾಷ್ನ್ನು ನೀಡಿದರೆ ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಮೇಲಿನ ಪ್ರಮಾಣದಲ್ಲಿ ಯೂರಿಯಾ ಮತ್ತು ಮ್ಯೂರೇಟ್ ಆಫ್ ಪೊಟಾಷ್ ಗೊಬ್ಬರದ ಒದಗಣೆಯಾಗುತ್ತದೆ.
ರೋಬಸ್ಟಾ ಕಾಫೀ ಗಿಡಗಳನ್ನು ಹತ್ತು ಅಡಿ ಅಂತರದಲ್ಲಿ ಮೂರುವರೆ ಅಡಿ ಚಚ್ಚೌಕ ಗುಂಡಿ ತೆಗೆದು ನೆಡುತ್ತಾರೆ. ಅರೆಬಿಕಾ ಕಾಫೀ ಗಿಡಗಳನ್ನು ೪ ಅಡಿ ೩ ಅಡಿ ಅಂತರದಲ್ಲಿ ನೆಟ್ಟು ಬೆಳೆಸುತ್ತಾರೆ.

Also read  Arabica coffee hits 1-month high on dry Brazilian weather

ಕಾಫೀ ಹೂ ಅರಳುವ ಪ್ರಕ್ರಿಯೆ:

ವಿಯೆಟ್ನಾಮಿನಲ್ಲಿ ಮಳೆ ಆಗಿಂದಾಗ್ಯೆ ಸುರಿಯುತ್ತಲೇ ಇರುವ ಕಾರಣ ಕಾಫೀ ಹೂವುಗಳು ಅರಳುತ್ತಲೇ ಇರುತ್ತವೆ. ಇದೊಂದು ನಿರಂತರ ಪ್ರಕ್ರಿಯೆ. (ರನ್ನಿಂಗ್ ಬ್ಲಾಸಮ್). ರೈತರು ಕಾಫೀ ಕೊಯ್ಯುವ ಸಮಯದಲ್ಲಿ ಕಾಫೀ ಬೀಜದ ಕೊಯ್ಲು ಮಾಡಲು ಇದರಿಂದ ತುಂಬಾ ಅಡಚಣೆಯಾಗುತ್ತದೆ. ಬಲಿತ ಕಾಫೀ ಬೀಜಗಳ ಗೊಂಚಲಿನಲ್ಲಿ ಅತ್ಯಂತ ಎಳೆಯ ಕಾಫೀಬೀಜಗಳೂ ಸೇರಿಕೊಂಡಿರುತ್ತವೆ. ಒಂದೇ ಗೊಂಚಲಿನಲ್ಲಿ ಕೆಂಪಾಗಿ ಹಣ್ಣಾಗಿರುವ ಕಾಫೀಬೀಜಗಳೂ, ತೀರಾ ಹಸಿರುಬಣ್ಣದ ಅತ್ಯಂತ ಎಳೆಯ ಕಾಫೀ ಬೀಜಗಳೂ ಇರುತ್ತವೆ. ಕಾಫೀ ಗಿಡಗಳ ಚಿಗುರು ತೆಗೆಯುವ ಕೆಲಸವೂ ಕೂಡ ವರ್ಷದ ಎಲ್ಲಾ ಕಾಲದಲ್ಲಿಯೂ ನಿರಂತರವಾಗಿ ಅಲ್ಲಿ ನಡೆಯುತ್ತಲೇ ಇರುತ್ತದೆ.

Also read  ‘ಕ್ಯಾರ್ ಚಂಡಮಾರುತ’:ಕಡಲ ಅಬ್ಬರ,ಉಡುಪಿ,ಚಿಕ್ಕಮಗಳೂರು,ಕೊಡಗು ಮಳೆ

ಉತ್ಪಾದಕತೆ ಮತ್ತು ಸಂಸ್ಕರಣೆ ಹೇಗೆ?

ಸಾಮಾನ್ಯವಾಗಿ ಹೆಕ್ಟೇರ್ ಒಂದಕ್ಕೆ ಮೂರು ಟನ್ ಕಾಫೀಬೆಳೆಯ ಇಳುವರಿಯನ್ನು ಅಲ್ಲಿನ ರೈತರು ಪಡೆಯುತ್ತಿದ್ದು, ಸಂಸ್ಕರಣೆಯನ್ನು ಅವರ ಮನೆಯಂಗಳದಲ್ಲಿಯೇ ಮಾಡುತ್ತಾರೆ. ಹಲ್ಲಿಂಗ್ ಮೆಶೀನ್ ಬೆಳೆಗಾರನ ಮನೆಬಾಗಿಲಿಗೇ ಬರುತ್ತದೆ ಮತ್ತು ಕಾಫೀಯನ್ನು ಸಂಸ್ಕರಿಸಿ ಕೊಡುತ್ತದೆ. ಪ್ರಸ್ತುತ ಪ್ರತಿ ಟನ್ ಕಾಫೀಗೆ ಸರಿಸುಮಾರು ೧೬೦೦ ಡಾಲರ್ ಬೆಲೆ ಇದೆ.

ಕಾರ್ಮಿಕರ ನಿರ್ವಹಣೆ ಹೇಗೆ?

ಇತ್ತೀಚಿನ ದಿನಗಳಲ್ಲಿ ರೋಬಸ್ಟಾ ಬೆಳೆ ನಿರ್ವಹಣಾ ವೆಚ್ಚ ಅಧಿಕವಾಗುತ್ತಿದ್ದು, ಪ್ರತಿ ಕಾರ್ಮಿಕನೂ ಅಂದಾಜು ದಿನವೊಂದಕ್ಕೆ ಎಂಟು ಡಾಲರ್ನಂತೆ ಅಥವಾ ಮಾಸಿಕ ನೂರೈವತ್ತು ಡಾಲರ್ನಂತೆ ಕೂಲಿಯನ್ನು ಪಡೆಯುತ್ತಾನೆ. ಸರಕಾರದಿಂದ ವಿದ್ಯಚ್ಛಕ್ತಿ, ಗೊಬ್ಬರ, ಅನಿಲಬಳಕೆ ಹೀಗೆ ಯಾವುದೇ ಬಾಬ್ತಿಗೂ ಸಹಾಯಧನ ಎಂಬುದು ಇಲ್ಲವೇ ಇಲ್ಲ. ೨೫ ಕೆಜಿ ಗೊಬ್ಬರದ ಮೂಟೆಗೆ ೪೦ ಡಾಲರ್ ಬೆಲೆ ಇದೆ. ರೋಬಸ್ಟಾ ಬೆಳೆ ತುಂಬಾ ಖರ್ಚು ತಗಲುವ ಬಾಬತ್ತಾಗಿರುವುದರಿಂದ ಅನೇಕ ರೈತರು ಇದರಿಂದ ದೂರ ಸರಿದು ಕಾಳು ಮೆಣಸು ಕೃಷಿಯತ್ತ ವಾಲುತ್ತಿದ್ದಾರೆ. ಸಣ್ಣ ಬೆಳೆಗಾರರು ಬಹುತೇಕ ತೋಟದ ಕೆಲಸಗಳನ್ನು ಸ್ವಂತ ಮಾಡುತ್ತಾರೆ. ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾದರೆ ಅತ್ಯಂತ ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ. ಸಂಬಳವೂ ಅತ್ಯಂತ ಕಡಿಮೆ. ಕಾರ್ಮಿಕರಿಗೆ ಸಂಬಳದ ವಿನಹಾ ಬೇರಾವ ಸೌಲಭ್ಯಗಳನ್ನೂ ಬೆಳೆಗಾರರು ಅಲ್ಲಿ ಒದಗಿಸುವುದಿಲ್ಲ. ಕೆಲಸದಾಳಿನ ಊಟೋಪಚಾರಗಳು ಬೆಳೆಗಾರನ ಮನೆಯಲ್ಲಿಯೇ ಆಗುತ್ತದೆ. ಕಾರ್ಮಿಕರಿಗೆ ನಿಗದಿಯಾದ ಹೊತ್ತು ಗೊತ್ತುಗಳು ಇರುವುದಿಲ್ಲ. ಉದಾಹರಣೆಗೆ, ಗಿಡಗಳಿಗೆ ನೀರು ಹಾಯಿಸುವ ಸಮಯದಲ್ಲಿ ಕೆಲಸಗಾರ ಮಧ್ಯಾಹ್ನದ ನಂತರದಿಂದ ಕೆಲಸ ಪ್ರಾರಂಭ ಮಾಡಿ ರಾತ್ರಿ ೮-೯ ಗಂಟೆಯ ತನಕವೂ ಮಾಡುತ್ತಾನೆ.

Also read  Vietnam's exports high in feb month

ಕಾಳುಮೆಣಸಿನ ಕೃಷಿ

ಸಮುದ್ರ ಮಟ್ಟದಿಂದ ೩೦೦-೧೮೦೦ ಅಡಿಗಳ ಎತ್ತರದವರೆಗೆ ದೇಶಾದ್ಯಂತ ವಿಸ್ತರಿಸಲ್ಪಟ್ಟಿರುವ ಕಾಳುಮೆಣಸಿನ ಕೃಷಿ ಉತ್ಕೃಷ್ಟಮಟ್ಟದ್ದಾಗಿದೆ. ಇಳಿಜಾರು ಮತ್ತು ಮಟ್ಟಸ ಪ್ರದೇಶ ಹೀಗೆ ವಿವಿಧ ಬಗೆಯ ಭೂಮಿಗಳಲ್ಲಿ ಅವರು ಕಾಳುಮೆಣಸು ಬೆಳೆದು ಯಶ ಕಂಡಿದ್ದಾರೆ. ೩ ಘಿ ೩ ಮೀಟರು ಅಂತರದಲ್ಲಿ ಚೆನ್ನಾಗಿ ಉತ್ತಿದ ರಂಧ್ರಯುಕ್ತ ಮಣ್ಣಿನಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ನೆಡಲಾಗಿದೆ. ಯಾವುದೇ ಕಾಡುಮರಗಳನ್ನು ಆಧಾರಕ್ಕೆ ಬೆಳೆಸದೇ, ಜೀವಂತ ಹಾಗೂ ನಿರ್ಜೀವ ಆಧಾರ ಸ್ಥಂಭಗಳ ಸಂಯೋಜನೆಯೊಂದಿಗೆ ಬಳ್ಳಿಗಳ ಹಬ್ಬುವಿಕೆ ಇಲ್ಲಿ ಕಾಣಬಹುದಾಗಿದೆ. ಕೆಲವೆಡೆ ನಿರ್ಜೀವ ಮರದ ಕಂಬಗಳು, ಟೊಳ್ಳಾದ ಇಟ್ಟಿಗೆಯ ಸ್ಥಂಭಗಳನ್ನು ಕೂಡ ಬಳ್ಳಿ ಹಬ್ಬಿಸಲು ಬಳಸಲಾಗಿರುವುದು ವಿಶೇಷ. ನಮ್ಮ ಕರಿಮುಂಡಾ ತಳಿಯನ್ನು ಹೋಲುವಂತಹ ವಿವಿಧ ತಳಿಗಳನ್ನು ಇಲ್ಲಿನ ರೈತರು ಬೆಳೆಯುತ್ತಿದ್ದು, ಪ್ರತಿ ಬಳ್ಳಿಗೂ ಜೈವಿಕ ಗೊಬ್ಬರ ಮತ್ತು ೧೦-೧೫ ದಿನಗಳಿಗೊಮ್ಮೆ ನೀರು ಹಾಯಿಸುವಿಕೆ ನಡೆಯುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಮೊದಲ ಮಳೆಯ ಸಿಂಚನದ ನಂತರ ಒದಗಿಸುತ್ತಾರೆ. ಅವಶ್ಯಕತೆಗೆ ತಕ್ಕಂತೆ ಯುಕ್ತವಾದ ಕ್ರಿಮಿನಾಶಕಗಳ ಸಿಂಪರಣೆಯೂ ಇದೆ.ಆದರೆ ಎಲ್ಲಿಯೂ ಬೊರ್ಡೋ ಸಿಂಪರಣಾ ಪದ್ಧತಿಯು ಕಂಡು ಬರಲಿಲ್ಲ. ಬದಲಾಗಿ ರೋಗಗ್ರಸ್ತ ಬಳ್ಳಿಗಳನ್ನು ಬುಡಸಮೇತ ಕಿತ್ತು ಆ ಸ್ಥಳದ ಮಣ್ಣನ್ನು ಪುನಶ್ಚೇತನಗೊಳಿಸಿ ಹೊಸ ಬಳ್ಳಿಗಳನ್ನು ಹತ್ತಿರದಲ್ಲೇ ನೆಡುವ ಪದ್ಧತಿಯನ್ನೂ ಗಮನಿಸಿದೆವು. ಇಳುವರಿ ಕೂಡ ಗಣನೀಯವಾಗಿದ್ದು ನಮ್ಮಲ್ಲಿನ ಇಳುವರಿಗಿಂತ ಅಲ್ಲಿನ ಸರಾಸರಿ ಇಳುವರಿ ಅನುಪಾತ ಹೆಚ್ಚಾಗಿಯೇ ಇದೆ.

ಬೆಳೆಗಾರರ ಜೀವನ ಕ್ರಮ

ಅಚಲವಾದ ರಾಷ್ಟ್ರಭಕ್ತಿ, ನಿರಂತರವಾದ ಶ್ರಮಜೀವನ, ತುಂಬು ಮನಸ್ಸಿನ ಕಾರ್ಯ ಶ್ರದ್ಧೆ, ಸರಲ ಬದುಕು, ಆಡಂಬರದ ಮೋಜಿನ ಜೀವನಕ್ಕೆ ದೂರದಿಂದಲೇ ವಿದಾಯ, ಮಿತವ್ಯಯದ ಪಾಲನೆ ಹಾಗೂ ವಿಯೆಟ್ನಾಂ ಸರಕಾರದಿಂದ ಸಹಕಾರ ಮತ್ತು ಪ್ರೋತ್ಸಾಹ ಮತ್ತು ವಿಯೆಟ್ನಾಂ ದೇಶದ ಪ್ರಕೃತಿ ಮತ್ತು ಹವಾಮಾನದ ಕೊಡುಗೆಯಿಂದ ಕಿರಿದಾದ ಈ ರಾಷ್ಟ್ರ ವಿಶ್ವದಲ್ಲಿಯೇ ಕಾಫಿ ಬೆಳೆಯುವ ಎರಡನೇ ದೊಡ್ಡ ದೇಶ, ಪ್ರಪಂಚದಲ್ಲಿಯೇ ಮೆಣಸಿನ ಬೆಳೆಯ ಉತ್ಪನ್ನದಲ್ಲಿ ಮೊದಲನೆಯ ದೇಶವಾಗಿ ಹೊರಹೊಮ್ಮುವಲ್ಲಿ ಸಾಧ್ಯವಾಗಿದೆ.

ಕೃಪೆ :ನೇಗಿಲ ಮಿಡಿತ -ಸಂಪುಟ ೨,ಸಂಚಿಕೆ ೧೨

Also read  Kerala farmers back to cardamom cultivation as the price hits a record high