ಘಟ್ಟ ಪ್ರದೇಶದಲ್ಲಿ ಮುಂಗಾರು ಬಿರುಸು :ತುಂಬಿ ಹರಿಯುತ್ತಿರುವ ಹೇಮಾವತಿ,ಕಾವೇರಿ

ರಾಜ್ಯದ ಘಟ್ಟ ಪ್ರದೇಶದಲ್ಲಿ ಮುಂಗಾರು ಬಿರುಸಾಗಿದ್ದು,ಸಕಲೇಶಪುರ,ಮೂಡಿಗೆರೆ,ಕಳಸ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದಂಚಿನ ಗ್ರಾಮಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು,ಹೇಮಾವತಿ ನದಿಯೂ ತುಂಬಿ ಹರಿಯುತ್ತಿದೆ.

ಸಕಲೇಶಪುರ ಭಾಗದ ಹೆತ್ತೂರು,ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಸರಾಸರಿ 70 ಮಿ.ಮೀ.ಮಳೆ ದಾಖಲಾದರೆ, ಕಸಬಾ ಹೋಬಳಿಯಲ್ಲಿ ಸರಾಸರಿ 60 ಮಿ.ಮೀ. ಬೆಳಗೋಡು ಹೋಬಳಿಯಲ್ಲಿ 30 ಮಿ.ಮೀ. ಯಸಳೂರು ಹೋಬಳಿಯಲ್ಲಿ 50 ಮಿ.ಮೀ. ಮಳೆಯಾಗಿದೆ.‌

Also read  Arabica coffee tumbled to 2019 lows

ಕಳೆದ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಕೊಡಗು ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಬಿಟ್ಟುಬಿಟ್ಟು ಬರುತ್ತಿದೆ. ಈ ಭಾಗದಲ್ಲಿ 2–3 ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿಕೊಳ್ಳುತ್ತಿದೆ.

ಕೊಡಗು ಜಿಲ್ಲೆಯ ನಾಪೋಕ್ಲು, ಭಾಗಮಂಡಲ, ತಲಕಾವೇರಿಯಲ್ಲಿ ಬಿಡುವು ಕೊಟ್ಟು ಮಳೆಯಾಗುತ್ತಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಾದಾಪುರ ವ್ಯಾಪ್ತಿಯಲ್ಲಿ ತುಂತುರು ಮಳೆ ಬಂತು. ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಭಾಗಮಂಡಲದಲ್ಲಿ ಮಳೆಯ ಪ್ರಮಾಣ ಇಳಿಮುಖ ಆಗಿರುವುದರಿಂದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಸುಮಾರು 1 ಅಡಿಗಳಷ್ಟು ನೀರು ಕಡಿಮೆ ಆಗಿದೆ. ಈ ವ್ಯಾಪ್ತಿಯಲ್ಲಿ ಮಾಮೂಲಿಯಂತೆ ಒಂದೇ ಸಮನೆ ಮಳೆ ಸುರಿಯುವ ಬದಲು ಆಗಾಗ ಬಿಡುವು ತೆಗೆದುಕೊಂಡು ಮಳೆ ಬರುತ್ತಿದೆ. ಹಾಗಾಗಿ ನದಿಯಲ್ಲಿ ನೀರಿನ ಮಟ್ಟ ಇಳಿಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಕಳೆದ 24 ಗಂಟೆಗಳ ಕರ್ನಾಟಕದ ಮಳೆ ನಕ್ಷೆ( 7th ಜುಲೈ 2019ರ 8.30AM ರಿಂದ 8th ಜುಲೈ 2019 ರ 8.30AM ರವರೆಗೆ) ಅತ್ಯಧಿಕ ಮಳೆ 207 ಮಿಮೀ ಉತ್ತರ ಕನ್ನಡ ಜಿಲ್ಲೆಯ ಶಿವಳ್ಳಿ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳಲ್ಲಿ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರಿದಿದ್ದು, ಮೂರು ದಿನದಿಂದ ಎಡಬಿಡದೇ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಕಳಸದಲ್ಲಿ ಭಾನುವಾರ ಸುರಿದ ಮಳೆಯ ಪ್ರಮಾಣ ಶನಿವಾರಕ್ಕಿಂತ ಕಡಿಮೆ ಇತ್ತು.
ಮಳೆಯೊಂದಿಗೆ ರಭಸವಾಗಿ ಗಾಳಿ ಬೀಸಿದ್ದರಿಂದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮ, ಕೆಲವು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಮಳೆಯಿಂದಾಗಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು ಬೆಟ್ಟದಮನೆ, ಕಿತ್ಲೆಗಂಡಿ, ಹಂತೂರು ಹಾಗೂ ಬಂಕೇನಹಳ್ಳಿಯಲ್ಲಿರುವ ಹೇಮಾವತಿ ಸೇತುವೆಗಳ ಬಳಿಗೆ ತೆರಳಿ ಜನರು ನದಿಯು ಹರಿಯುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಭಾನುವಾರ ಬಹುತೇಕ ಬಿಸಿಲಿನ ವಾತಾವರಣ ಇತ್ತು.

Also read  ಆರಂಭವಾಗದ ಮಳೆ: ಅಡಿಕೆಗೆ ಸಕಾಲಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಲು ಅನುವು