ಕೊಡಗು,ಕರಾವಳಿ,ಉತ್ತರಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ:ಶಾಲಾ–ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಮಳೆ ತೀವ್ರತೆ ಪಡೆದಿದೆ.ಕಾವೇರಿ ನದಿಯಲ್ಲಿ ಹೆಚ್ಚಿನ ನೀರು ಹರಿಯುವಲ್ಲಿ ಮಹತ್ವದ ಪಾತ್ರ ವಹಿಸುವ ನದಿಯ ಉಗಮ ಸ್ಥಾನ ತಲಕಾವೇರಿ ಮತ್ತು ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಬೀಳುವ ಭಾಗಮಂಡಲದಲ್ಲೂ ಮಳೆಯ ಅಬ್ಬರ ಅಷ್ಟೇನೂ ಜೋರಾಗಿಲ್ಲ.ಆದರೆ ಸೋಮವಾರ ಮಧ್ಯಾಹ್ನದ ನಂತರ ಚುರುಕಾಗಿತ್ತು .ಭಾಗಮಂಡಲ,ನಾಪೋಕ್ಲು ರಸ್ತೆ ಮೇಲೆ ಸಂಜೆ ಹೊತ್ತಿಗೆ ಸುಮಾರು 1 ಅಡಿಗಳಷ್ಟು ನೀರು ಹರಿಯುತ್ತಿದ್ದು,ಸಂಪರ್ಕ ಕಡಿತಗೊಂಡಿದೆ.

ಎರಡು ದಿನಗಳಿಂದ ಸುರಿದಿದ್ದ ಧಾರಾಕಾರ ಮಳೆಗೆ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಮೈದುಂಬಿಕೊಂಡಿವೆ.ಅಬ್ಬಿ,ಮಲ್ಲಳ್ಳಿ ಹಾಗೂ ಇರ್ಪು ಜಲಪಾತಗಳಿಗೆ ಜೀವಕಳೆ ಬಂದಿದ್ದು.

ಭಾಗಮಂಡಲ,ತಲಕಾವೇರಿ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಒಳಹರಿವು 1,748 ಕ್ಯುಸೆಕ್‌ಗೆ ಏರಿಕೆಯಾಗಿದೆ. ಎರಡು ದಿನಗಳಲ್ಲಿ ಹಾರಂಗಿಗೆ 2 ಅಡಿ ಯಷ್ಟು ನೀರು ಹರಿದುಬಂದಿದೆ.

ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಳೆ ಬಿರುಸಾಗಿದೆ. ಮಂಗಳೂರು ನಗರದಲ್ಲಿ ಆಗಾಗ ಬಿಡುವು ನೀಡಿ ಜೋರಾಗಿ ಮಳೆ ಸುರಿಯುತ್ತಿದ್ದು,ಕೆಲವೆಡೆ ಗುಡ್ಡ ಕುಸಿತ,ಮರ ಬಿದ್ದು ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರಿದಿದೆ.

ಕೊಡಗು,ದಕ್ಷಿಣ ಕನ್ನಡ,ಉತ್ತರಕನ್ನಡದಲ್ಲಿ ‘ರೆಡ್ ಅಲರ್ಟ್‌’:ಶಾಲಾ ಕಾಲೇಜುಗಳಿಗೆ ರಜೆ

ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ (ಜುಲೈ 23) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಿದೆ .

ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಮತ್ತಷ್ಟು ಮಳೆ ಬರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿ ‘ರೆಡ್‌ ಅಲರ್ಟ್’ ಘೋಷಿಸಿದೆ. ಪಶ್ಚಿಮ ಭಾಗದಿಂದ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಕಡಲಿಗೆ ಇಳಿಯದಿರುವುದು ಉತ್ತಮ ಎಂದು ಇಲಾಖೆ ಸಲಹೆ ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾದ ಪರಿಣಾಮ ‘ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಲಾಗಿತ್ತು.ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ ‘ರೆಡ್‌ ಅಲರ್ಟ್‌‘ ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕೋರಿದ್ದಾರೆ. ಪ್ರಕೃತಿ ವಿಕೋಪ ಸಂಬಂಧ ಸಹಾಯವಾಣಿ ಆರಂಭಿಸಲಾಗಿದ್ದು ಸಮಸ್ಯೆಯಾದರೆ ದೂರವಾಣಿ: 08272 221077 ಹಾಗೂ ಮೊಬೈಲ್‌: 85500 01077 ಸಂಪರ್ಕಿಸಲು ಕೋರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ,ಸರಕಾರಿ,ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜು (ಪದವಿ ಪೂರ್ವ ತರಗತಿವರೆಗೆ) ಗಳಿಗೆ ಜು.23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು: 24×7 ಕಂಟ್ರೋಲ್ ರೂಂ: 1077 , ವಾಟ್ಸ್ಯಾಪ್ ಸಂಖ್ಯೆ: 9483908000

Also read  ಕರಾವಳಿ, ಮಲೆನಾಡಿನಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ