ಮಲೆನಾಡಿನಲ್ಲಿ ಬಿರಿಸಿನ ಮಳೆ:ಜಲಾಶಯಗಳ ಒಳಹರಿವು ಹೆಚ್ಚಳ

ಕೊಡಗು,ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರಿಸಿನ ಮಳೆ ಮುಂದುವರಿದಿದ್ದು ಜಲಾಶಯಗಳ ಒಳಹರಿವು ಹೆಚ್ಚಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಪರಿಣಾಮ ರೈತರು ಜಮೀನಿನತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದಿವೆ.

ಸತತ ಮಳೆಗೆ ಮಡಿಕೇರಿಯಿಂದ ಸೋಮವಾರಪೇಟೆಗೆ ತೆರಳುವ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ರಸ್ತೆ ಕುಸಿದಿದ್ದ ಸ್ಥಳದಲ್ಲಿ ಸ್ಯಾಂಡ್‌ಬ್ಯಾಗ್‌ ಅಳವಡಿಸಿ, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಅಂಥ ಸ್ಥಳಗಳಲ್ಲಿ ಈಗ ಬಿರುಕು ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಬ್ಯಾರಿಕೇಡ್‌ ಹಾಕಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮತ್ತೆ ವರುಣ ಅಬ್ಬರಿಸಿದರೆ ರಸ್ತೆ ಕುಸಿದು ವಾಹನ ಸಂಚಾರ ಬಂದ್‌ ಆಗುವ ಸಾಧ್ಯತೆ ಇದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಇದೇ ತಾಲ್ಲೂಕಿನ ಹೆಸ್ಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತತ್ಕೊಳ ಗ್ರಾಮದ ಬಳಿ ಗುಡ್ಡ ಕುಸಿದು ಮೂಡಿಗೆರೆ- ಕುಂದೂರು ರಸ್ತೆಯ ಸಂಪರ್ಕ ಕೆಲ ಕಾಲ ಕಡಿತಗೊಂಡಿತ್ತು. 

Also read  ನಿಮ್ಮ ಮೊಬೈಲ್ ಗೆ ಬರಲಿದೆ ಗುಡುಗು-ಮಳೆಯ ಸಂಪೂರ್ಣ ಮಾಹಿತಿ

ಜಲಾಶಯದ ಒಳಹರಿವು ಹೆಚ್ಚೆಳ

ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಇದೇ ರೀತಿ ನಿರಂತರ ಎರಡು ದಿನ ಮಳೆ ಸುರಿದಲ್ಲಿ ಭಾಗಮಂಡಲ ಮುಳುಗಡೆಯಾಗುವ ಸಾಧ್ಯತೆಯಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಿಂದಾಗಿ ಹೇಮಾವತಿ  ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಜಪಾವತಿ, ಊರುಬಗೆಹಳ್ಳ, ಚಿಕ್ಕಳ್ಳಗಳಲ್ಲಿ ನೀರು ಹೆಚ್ಚಾಗಿದೆ.

ಹೊಸನಗರ ತಾಲೂಕು ಯಡೂರಲ್ಲಿ ಅತಿಹೆಚ್ಚು 198 ಮಿ.ಮೀ. ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಒಳಹರಿವು 23,191 ಕ್ಯೂಸೆಕ್‌, ತುಂಗಾ ಒಳಹರಿವು 16,239 ಕ್ಯೂಸೆಕ್‌ಗೆ, ಭದ್ರಾ ಒಳಹರಿವು 5,116 ಕ್ಯೂಸೆಕ್‌ಗೆ ಏರಿಕೆಯಾಗಿದೆ.

Also read  ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆ:ತುಂಬಿ ಹರಿದ ಹಳ್ಳ ಕೊಳ್ಳಗಳು