ಮುಂದುವರೆದ ಮಳೆ-ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನದಿಗಳ ನೀರಿನಮಟ್ಟ ಏರಿಕೆ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಬುಧವಾರ ಮಳೆ ಬಿರುಸಾಗಿದೆ. ನೇತ್ರಾವತಿ,ಹೆಬ್ಬಾಳೆ ಹೊಳೆ,ಕಾವೇರಿ,ಹೇಮಾವತಿ ನದಿಗಳ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಬುಧವಾರ ಮಧ್ಯಾಹ್ನದ ನಂತರ ನಾಪೋಕ್ಲು,ಮಡಿಕೇರಿ,ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಮಳೆ ಚುರುಕಾಗಿದೆ. ಮಂಗಳವಾರ ರಾತ್ರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಕಾವೇರಿ ನದಿಯು ಮತ್ತಷ್ಟು ಮೈದುಂಬಿಕೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ನೀರಿನಮಟ್ಟ ಕೊಂಚ ಏರಿಕೆಯಾಗಿದೆ. ಹಾರಂಗಿ ಒಳಹರಿವು 1,274 ಕ್ಯುಸೆಕ್‌ಗೆ ಏರಿಕೆ ಕಂಡಿದೆ. ನಾಪೋಕ್ಲು 50 ಮಿ.ಮೀ., ಭಾಗಮಂಡಲದಲ್ಲಿ 63, ಸಂಪಾಜೆ 46, ಶ್ರೀಮಂಗಲ 54, ಶಾಂತಳ್ಳಿ 58 ಮಿ.ಮೀ ಮಳೆಯಾಗಿದೆ.

ಮಂಗಳವಾರ ಸಂಜೆಯಿಂದ ಮಂಗಳೂರು ನಗರದಲ್ಲಿ ಮಳೆ ಬಿರುಸಾಗಿದೆ. ಬುಧವಾರ ಇಡೀ ದಿನ ನಗರಾದ್ಯಂತ ಭಾರಿ ಮಳೆ ಸುರಿದಿದ್ದು, ವಿವಿಧೆಡೆ ಭೂಕುಸಿತ ಮತ್ತು ಬಿರುಗಾಳಿಯಿಂದ ಕೆಲವು ಮನೆಗಳಿಗೆ ಹಾನಿಯಾಗಿದೆ. ಒಂದು ದಿನದ ಅವಧಿಯಲ್ಲಿ ನಗರದಲ್ಲಿ 50 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ. ಹೊರವಲಯದ ಗುರುಪುರ, ಮೂಲ್ಕಿ, ಸುರತ್ಕಲ್‌ ಸೇರಿದಂತೆ ಹಲವೆಡೆ ಭಾರಿ ಮಳೆ ಬಿದ್ದಿದೆ. ಇದು ಈ ಮುಂಗಾರಿನಲ್ಲಿ ನಗರದಲ್ಲಿ ಒಂದು ದಿನದ ಅವಧಿಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

Also read  Delayed yet Monsoon sets in Karnataka

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಹಾಸನ– ಮಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದ್ದ ಪ್ರದೇಶದಲ್ಲಿ ರೈಲು ಮಾರ್ಗದ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬುಧವಾರ ಪೂರ್ಣಗೊಂಡಿದೆ.

Also read  ಬಂಗಾಳ ಕೊಲ್ಲಿ ಚಂಡಮಾರುತ ಪ್ರಭಾವ: ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ