ಮುಂಗಾರು ಮಳೆ ಆರಂಭಕ್ಕೂ ಮುಂಚೆಯೇ ಮನೆ ಖಾಲಿ ಮಾಡುತ್ತಿರುವ ಕೊಡಗಿನ ಜನರು

ಕಳೆದ ವರ್ಷ ಭಯಾನಕ ಜಲಪ್ರಳಯಕ್ಕೆ ತುತ್ತಾಗಿದ್ದ ಕೊಡಗಿನ ಜನತೆ ಇನ್ನೂ ಅದೇ ಭೀತಿಯಲ್ಲಿದ್ದಾರೆ. ಮಳೆಗಾಲ ಆರಂಭವಾದರೆ ಮತ್ತೆ ಭೂಕುಸಿತವಾಗಬಹುದು ಎಂದು ತೀವ್ರ ಆತಂಕಿತರಾಗಿದ್ದಾರೆ. ಮುಂಗಾರು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ತಮ್ಮ ಸ್ವಂತ ಮನೆಗಳನ್ನು ಸ್ವಯಂಪ್ರೇರಿತರಾಗಿ ಖಾಲಿ ಮಾಡಿ ಬಾಡಿಗೆ ಮನೆಗಳಿಗೆ ತೆರಳುತ್ತಿದ್ದಾರೆ.

ಮಹಾಮಳೆಯ ಸಂತ್ರಸ್ತರಿಗೆ ಜಂಬೂರು, ಕರ್ಣಂಗೇರಿ ಸೇರಿದಂತೆ ವಿವಿಧಡೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಆದಷ್ಟುಕೂಡಲೇ ಆದ್ಯತೆ ಮೇರೆಗೆ ಮನೆಗಳನ್ನು ವಿತರಿಸಲಾಗುವುದು.

-ಅನೀಸ್‌ ಕಣ್ಮಣಿ ಜಾಯ್‌, ಕೊಡಗು ಜಿಲ್ಲಾಧಿಕಾರಿ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಳೆದ ವರ್ಷ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಡಿಕೇರಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳಲ್ಲಿ ಮನೆಗಳು ಕೊಚ್ಚಿ ಹೋಗಿದ್ದವು ಅಥವಾ ನೆಲಕಚ್ಚಿದ್ದವು.

ಮಡಿಕೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲಿವೆ. ಈ ಬಾರಿಯ ಮಳೆಯಿಂದ ಮತ್ತೆ ಅನಾಹುತ ಸಂಭವಿಸಬಹುದೆಂದು ಮಳೆಗಾಲ ಆರಂಭಕ್ಕೆ ಒಂದು ತಿಂಗಳಿರುವ ಮುಂಚೆಯೇ ಗುಡ್ಡ ಭಾಗದಲ್ಲಿರುವ ತಮ್ಮ ಮನೆಗಳಲ್ಲಿನ ವಸ್ತುಗಳನ್ನು ತೆಗೆದುಕೊಂಡು ಇತರೆ ಕಡೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಜನರು ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆಯಾಗುತ್ತದೆ ಎಂಬ ಮಾಹಿತಿ ಇದೆ. ಕೆಲವು ವಿಜ್ಞಾನಿಗಳು ನೀಡುವ ಹೇಳಿಕೆಯಿಂದ ಜನರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ.

-ಡಾ. ಶ್ರೀನಿವಾಸ ರೆಡ್ಡಿ, ನಿರ್ದೇಶಕರು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳಲ್ಲಿ ಜಲಪ್ರಳಯದ ಭೀಕರತೆಗೆ ಕೂಲಿ ಕಾರ್ಮಿಕರು, ಬಡವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಸಂತ್ರಸ್ತರು ರೋದಿಸುತ್ತಲೇ ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು.

ಕೊಡಗಿನ 840 ಕುಟುಂಬಗಳು ಪ್ರಕೃತಿ ವಿಕೋಪ ಸಂತ್ರಸ್ತರಾಗಿದ್ದು, ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸುವ ಹೊಣೆಯನ್ನು ಕರ್ನಾಟಕ ಹ್ಯಾಬಿಟೇಟ್‌ ಸಂಸ್ಥೆಗೆ ವಹಿಸಲಾಗಿದೆ. ಈ ಮಳೆಗಾಲಕ್ಕೆ ಮುಂಚಿತವಾಗಿ ಸಂತ್ರಸ್ತರಿಗೆ 100 ಮನೆಗಳು ದೊರಕುವುದು ಕಷ್ಟಸಾಧ್ಯವಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಕುಟುಂಬವೊಂದಕ್ಕೆ 10 ಸಾವಿರದಂತೆ ತಿಂಗಳಿಗೆ ಬಾಡಿಗೆ ಹಣ ನೀಡಲಾಗುತ್ತಿದೆ.

Also read  ಕೊಡಗು,ಶೃಂಗೇರಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ:ಕಾಫಿ ಬೆಳೆಗಾರರು ಸಂತಸ