ಕಾಫಿ ಸಮಸ್ಯೆ ಪರಿಹಾರಕ್ಕೆ ಕಾಫಿ ಜಿಲ್ಲೆಗಳ ಸಂಸದರು ಬದ್ದ – ಬೇಲೂರಿನಲ್ಲಿ ಮಹತ್ವದ ಸಭೆ

ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಚಚಿ೯ಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದರೊಂದಿಗಿನ ಮಹತ್ವದ ಸಭೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿನ ಪ್ಲಾಂಟರ್ಸ್ ಕ್ಲಬ್ ನಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದಿಂದ ಆಯೋಜಿಸಲಾಗಿತ್ತು.ನೂತನವಾಗಿ ಲೋಕಸಭೆಗೆ ಆಯ್ಕೆಯಾದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ತೇಜಸ್ವಿ ಸೂಯ೯, ಪ್ರಜ್ಲಲ್ ರೇವಣ್ಣ ಅವರನ್ನು ಈ ಕಾಯ೯ಕ್ರಮದಲ್ಲಿ ಕಾಫಿ ಬೆಳೆಗಾರರ ಪರವಾಗಿ ಅಭಿನಂದಿಸಲಾಯಿತು.ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವಿವಿದೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡಿದ್ದು ಸಭಾಂಗಣ ಕಿಕ್ಕಿರಿದಿತ್ತು.

ಕಾಫಿ ಜಿಲ್ಲೆಗಳ ಸಂಸದರು ಒಗ್ಗಟ್ಟಾಗಿ ಕಾಫಿ ಉದ್ಯಮಯ ಸಂಕಷ್ಟ ಪರಿಹಾರಕ್ಕೆ ಮುಂದಾಗುತ್ತೇವೆ -ಶೋಭಾ ಕರಂದ್ಲಾಜೆ

ಕಾಫಿ ಬೆಳೆಗಾರರೊಂದಿಗೆ ಕಾಫಿ ಜಿಲ್ಲೆಗಳ ಸಂಸದರು ಸದಾ ಇರುತ್ತೇವೆ ಎಂದು ಭರವಸೆ ನೀಡಿದ ಶೋಭಾಕರಂದ್ಲಾಜೆ, ಕಾಳುಮೆಣಸಿಗೆ ಕನಿಷ್ಟ 375 ರು. ಬೆಲೆ ದೊರಕಬೇಕಾದರೆ ರಾಜ್ಯ ಸಕಾ೯ರ ತನ್ನ ಆರ್ ಎಂ. ಸಿ ತೆರಿಗೆಯನ್ನು ಹಿಂಪಡೆಯಲಿ ಎಂದು ಸಲಹೆ ನೀಡಿದರು. ಕಾಫಿ ಮಂಡಳಿಯಲ್ಲಿ ಈಗಿರುವ ಕಾಯ೯ದಶಿ೯ ಇರುವಷ್ಟು ದಿನಗಳು ಮಂಡಳಿ ಉದ್ದಾರವಾಗದು ಎಂದೂ ಶೋಭಾಕರಂದ್ಲಾಜೆ ಕಾಯ೯ದಶಿ೯ ವಿರುದ್ದ ತಮ್ಮ ಅಸಮಧಾನ ಹೊರಹಾಕಿದರು.ಚುನಾವಣೆ ಮುಗಿದಾಕ್ಷಣ ಪಕ್ಷ ರಾಜಕೀಯ ಮುಕ್ತಾಯವಾಗಿದೆ. ಹೀಗಾಗಿ ಕಾಫಿ ಜಿಲ್ಲೆಗಳ ಸಂಸದರು ಒಗ್ಗಟ್ಟಾಗಿ ಕಾಫಿ ಉದ್ಯಮಯ ಸಂಕಷ್ಟ ಪರಿಹಾರಕ್ಕೆ ಮುಂದಾಗುತ್ತೇವೆ ಎಂದೂ ಶೋಭಾ ಕರಂದ್ಲಾಜೆ ತಿಳಿಸಿದರು.

ನೇಪಾಳದಿಂದ ಭಾರತಕ್ಕೆ ಆಮದಾಗುತ್ತಿರುವ ಕಾಳುಮೆಣಸು ತಡೆಗೆ ಎಲ್ಲಾ ರೀತಿಯ ಕ್ರಮ- ಪ್ರತಾಪ್ ಸಿಂಹ

ನೇಪಾಳದಿಂದ ಭಾರತಕ್ಕೆ ಆಮದಾಗುತ್ತಿರುವ ಕಾಳುಮೆಣಸು ತಡೆಗೆ ಕೇಂದ್ರ ಸಕಾ೯ರ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ,ಈ ಮೂಲಕ ಕಾಳುಮೆಣಸು ದರ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದ ಪ್ರತಾಪ್ ಸಿಂಹ, ಕಳೆದ 5 ವಷ೯ಗಳಲ್ಲಿ ಕನಾ೯ಟಕದ ಕಾಫಿ ಜಿಲ್ಲೆಗಳಿಗೆ ಕಸ್ತೂರಿರಂಗನ್ ವರದಿಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಕಸ್ತೂರಿರಂಗನ್ ವರದಿಯಿಂದ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಹೇಳಿದರು. ಕಾಫಿ ಮಂಡಳಿಗೆ ಬೆಳೆಗಾರರ ಬೇಡಿಯಂತೆ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿಸಲಾಗಿದೆಯಾದರೂ ಆ ಅಧ್ಯಕ್ಷರಿಗೆ ದೊರಕಬೇಕಾದ ಅಧಿಕಾರ, ಕೆಲವು ಅಧಿಕಾರಿಗಳ ಲಾಭಿಯಿಂದಾಗಿ ಇನ್ನೂ ದೊರಕಿಲ್ಲ. ಇದೀಗ ಎಲ್ಲಾ ಸಂಸದರು ಈ ನಿಟ್ಟಿನಲ್ಲಿ ಗಮನ ಹರಿಸಿ ಕಾಫಿ ಮಂಡಳಿ ಅಧ್ಯಕ್ಷರಿಗೆ ಸೂಕ್ತ ಅಧಿಕಾರ ದೊರಕಿಸುತ್ತೇವೆ ಎಂದೂ ಪ್ರತಾಪ್ ಸಿಂಹ ಹೇಳಿದರು.

ಕೖಷಿ ಇಲಾಖೆಯಿಂದ ಯಾವೆಲ್ಲಾ ಸೌಲಭ್ಯಗಳು,ಸವಲತ್ತುಗಳು ಕೖಷಿಕರಿಗೆ ದೊರಕುತ್ತಿವೆಯೋ ಆ ಎಲ್ಲಾ ಸೌಲಭ್ಯಗಳೂ ಕಾಫಿ ಬೆಳೆಗಾರರಿಗೂ ದೊರಕುವಂತಾಗಲಿ – ತೇಜಸ್ವಿ ಸೂಯ೯

ಕಾಫಿ ಬೆಳೆಗಾರರೂ ಆಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವಸಂಸದ ತೇಜಸ್ವಿ ಸೂಯ೯ ಮಾತನಾಡಿ, ನಾನೂ ಬೆಳೆಗಾರನ ಮಗನಾಗಿ ಕಾಫಿ ಸಮಸ್ಯೆಯನ್ನು ಚೆನ್ನಾಗಿ ತಿಳಿದಿರುವೆ. ಹೀಗಾಗಿ ಕಾಫಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರದೊಂದಿಗೆ ವ್ಯವಹರಿಸುವೆ . ಸಂಸತ್ತಿನಲ್ಲೂ ಸಮಸ್ಯೆಯ ಬಗ್ಗೆ ಪ್ರಾಮಾಣಿಕವಾಗಿ ಚಚಿ೯ಸುವೆ ಎಂದು ಹೇಳಿದರು. ಕಾಳುಮೆಣಸಿನ ಸಮಸ್ಯೆಯನ್ನು ಕೂಡಲೇ ಪರಿಹರಿಸದೇ ಹೋದಲ್ಲಿ ಕಾಫಿ ಬೆಳೆ ಕುಸಿದದಿಂದಾಗಿ ಕಂಗೆಟ್ಟಿರುವ ಬೆಳೆಗಾರ ಕಾಳುಮೆಣಸಿನ ಮೇಲೂ ಭರವಸೆ ಕಳೆದುಕೊಂಡು ಮತ್ತಷ್ಟು ಅತಂತ್ರ ಸ್ಥಿತಿ ತಲುಪುತ್ತಾನೆ. ಹೀಗಾಗದಂತೆ ಕಾಫಿ ಜಿಲ್ಲೆಗಳ ಸಂಸದರು ಗಮನಹರಿಸುತ್ತೇವೆ ಎಂದು ಭರವಸೆ ನುಡಿಯಾಡಿದರು.ಕಾಫಿ ಬೆಳೆಗಾರ ಎಂದರೆ ಶ್ರೀಮಂತರು ಎಂಬ ಪೂವ೯ಗ್ರಹಪೀಡಿತ ಭಾವನೆ ದೂರವಾಗಿ ಕಾಫಿ ಕೖಷಿಕರ ನೈಜ ಸಮಸ್ಯೆ ಸಕಾ೯ರಕ್ಕೆ ತಲುಪಿಸಲ ಸಂಸದರಾಗಿ ತಾವೆಲ್ಲಾ ಭದ್ದರಾಗಿರುವುದಾಗಿ ತೇಜಸ್ವಿ ಸೂಯ೯ ಭರವಸೆ ನೀಡಿದರು.

ಎಚ್.ಡಿ.ದೇವೇಗೌಡರು ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರೆ ಕಾಫಿ ಸಮಸ್ಯೆಯನ್ನು ಪರಿಹರಿಸಲು ಮತ್ತಷ್ಟು ಬಲ ಬರುತ್ತಿತ್ತು -ಪ್ರಜ್ವಲ್ ರೇವಣ್ಣ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಭಾರತಕ್ಕೆ 41 ಸಾವಿರ ಕೋಟಿ ರು. ಆದಾಯ ನೀಡಿರುವ ಕಾಫಿ ಬೆಳೆಗಾರರಿಗೆ ಸೇರಿದ 8 ಸಾವಿರ ಕೋಟಿ ರು. ಸಾಲಮನ್ನಾ ಮಾಡುವುದು ಸಕಾ೯ರದ ಕತ೯ವ್ಯವಾಗಬೇಕು. ಕಾಫಿ ಬೆಳೆಗಾರರಿಗೆ ಈ ಮೂಲಕ ನೈಜ ನ್ಯಾಯ ದೊರಕಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಗಾರರೊಂದಿಗೆ ಕಾಫಿ ಕಾಮಿ೯ಕರಿಗೂ ಆಥಿ೯ಕ ಶಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯದ ಕಾಫಿ ಜಿಲ್ಲೆಗಳ ಸಂಸದರು ಮುಂದಿನ ದಿನಗಳಲ್ಲಿ ರಾಜಕೀಯ ಬೇಧವಿಲ್ಲದೇ ಕೈಜೋಡಿಸುತ್ತಾರೆ ಎಂದು ಭರವಸೆ ನೀಡಿದರು.

 

Also read  Black pepper raises slightly on tight supply