ಜೂನ್ 8ರ ಹೊತ್ತಿಗೆ ಕರ್ನಾಟಕದ ಕರಾವಳಿಯನ್ನು ಮುಂಗಾರು ಪ್ರವೇಶಿಸಲಿದೆ

ಈ ಬಾರಿ ರಾಜ್ಯಕ್ಕೆ ಮುಂಗಾರು ಜೂನ್‌ 8ಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈರುತ್ಯ ಮುಂಗಾರು ಮಾರುತವು ಮೇ 22ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪ ಸಮೂಹವನ್ನು ಪ್ರವೇಶಿಸಲಿದೆ. ಜೂನ್‌ 4ರ ವೇಳೆಗೆ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ. ನಂತರ ಕರ್ನಾಟಕ ಕರಾವಳಿಯನ್ನು ಜೂನ್ 7 ಅಥವಾ 8ರಂದು ಪ್ರವೇಶಿಸಲಿದೆ. ಮಾರುತವು ಪ್ರಬಲವಾಗಿದ್ದರೆ ರಾಜ್ಯದಲ್ಲಿ 8 ದಿನ ನಿರಂತರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹವಾಮಾನ ವಿಶ್ಲೇಷಣಾ ಖಾಸಗಿ ಸಂಸ್ಥೆ ಸ್ಕೈಮೆಟ್ ಸಹ, ‘ಜೂನ್ 8ರ ಹೊತ್ತಿಗೆ ಕರ್ನಾಟಕದ ಕರಾವಳಿಯನ್ನು ಮುಂಗಾರು ಪ್ರವೇಶಿಸಲಿದೆ. ಆದರೆ ಎರಡು ದಿನ ಮುಂಚಿತವಾಗಿ ಅಥವಾ ಎರಡು ದಿನ ತಡವಾಗಿ ಪ್ರವೇಶಿಸುವ ಸಾಧ್ಯತೆಯೂ ಇದೆ’ ಎಂದು ಹೇಳಿದೆ.‌
ಜೂನ್‌ 4ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಇದು ವಾಡಿಕೆಗಿಂತ ಮೂರು ದಿನ ವಿಳಂಬ.

Also read  Heavy Rains lash parts of Madikeri and Mudigere

ಉತ್ತರ ಕರ್ನಾಟಕದಲ್ಲಿ ದುರ್ಬಲ: ದೇಶದಾದ್ಯಂತ ವಿವಿಧ ವಲಯಗಳಲ್ಲಿ ಈ ಬಾರಿ ಆಗಲಿರುವ ಮುಂಗಾರು ಮಳೆಯ ಪ್ರಮಾಣವನ್ನು ಸ್ಕೈಮೆಟ್ ಅಂದಾಜಿಸಿದೆ. ಸಂಬಂಧಿತ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಲಿದೆ. ಆದರೆ ಕರ್ನಾಟಕದ ಉತ್ತರ ಒಳನಾಡು ಮತ್ತು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಮುಂಗಾರು ದುರ್ಬಲವಾಗಿರಲಿದೆ ಎಂದು ಸ್ಕೈಮೆಟ್ ಹೇಳಿದೆ.

ಒಟ್ಟಾರೆ ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಇರಲಿದೆ. ವಾಡಿಕೆಯಲ್ಲಿ ಶೇ 92ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಕಳೆದ ವಾರವೇ ಹೇಳಿತ್ತು. ಹವಾಮಾನ ಇಲಾಖೆ ಸಹ ಹೀಗೇ ಹೇಳಿತ್ತು.

Also read  ಘಟ್ಟ ಪ್ರದೇಶದಲ್ಲಿ ಮುಂಗಾರು ಬಿರುಸು :ತುಂಬಿ ಹರಿಯುತ್ತಿರುವ ಹೇಮಾವತಿ,ಕಾವೇರಿ