ಮಡಿಕೇರಿ ಸಮೀಪ ರೆಸಾರ್ಟ್‌ ನಿರ್ಮಾಣಕ್ಕೆ 808 ಮರಗಳಿಗೆ ಕೊಡಲಿ

ಮಡಿಕೇರಿ ಸಮೀಪದ ಕೆ.ನಿಡುಗಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೆಸಾರ್ಟ್‌ ನಿರ್ಮಾಣಕ್ಕೆ ಸದ್ದಿಲ್ಲದೇ ಹಲವು ಮರಗಳನ್ನು ಕಡಿದು ಉರುಳಿಸಲಾಗಿದ್ದು ಅರಣ್ಯ ನಾಶ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಡು ನಾಶದಿಂದಲೇ ಜಿಲ್ಲೆಯಲ್ಲಿ ಕಳೆದ ವರ್ಷ ಭೂಕುಸಿತ ಸಂಭವಿಸಿದೆ’ ಎಂದು ಭೂವಿಜ್ಞಾನಿಗಳು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದರು. ಆದರೂ ನೂರಕ್ಕೂ ಹೆಚ್ಚು ಮರಗಳ ಮಾರಣ ಹೋಮ ನಡೆದಿರುವುದು ಬೆಳಕಿಗೆ ಬಂದಿದೆ.

Also read  ಜೂನ್ 8ರ ಹೊತ್ತಿಗೆ ಕರ್ನಾಟಕದ ಕರಾವಳಿಯನ್ನು ಮುಂಗಾರು ಪ್ರವೇಶಿಸಲಿದೆ

ನೇರಳೆ, ಹಲಸು, ಬೈನೆ ಸೇರಿದಂತೆ ಹಲವು ಕಾಡು ಜಾತಿಯ ಮರಗಳು ಗಾಳಿಬೀಡು ರಸ್ತೆಬದಿಯ ಸ್ಥಳದಲ್ಲಿ ನೆಲಕ್ಕುರುಳಿವೆ. ಮರಗಳ ಹನನ ಮಾಡಿರುವ ಸ್ಥಳಕ್ಕೆ ಗುರುವಾರ ಮಾಜಿ ಸಚಿವ ಎಂ.ಸಿ. ನಾಣಯ್ಯ, ‘ಗ್ರೀನ್‌ ಸಿಟಿ ಫೋರಂ’ ಅಧ್ಯಕ್ಷ ಕೆ.ಜಯಚಿಣ್ಣಪ್ಪ, ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ಹಾಗೂ ಪರಿಸರ ಪ್ರೇಮಿಗಳು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ರೆಸಾರ್ಟ್‌ ನಿರ್ಮಾಣ ಉದ್ದೇಶಕ್ಕೆ ಮರಗಳ ತೆರವಿಗೆ ಅನುಮತಿ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಇಡೀ ಪ್ರಕರಣದ ಕುರಿತು ತನಿಖೆ ನಡೆಸಬೇಕು. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಸ್ಥಳದಲ್ಲಿ ಕೋರಿದರು.

Also read  Cardamom price hits record high of Rs 5,000 per kg

ಆದೇಶದಲ್ಲಿ ರೆಸಾರ್ಟ್‌ ಉಲ್ಲೇಖ: ಗೃಹ ನಿರ್ಮಾಣ ಮಂಡಳಿಯು ಮನೆ ನಿರ್ಮಾಣದ ಕೋರಿಕೆಯ ಮೇರೆಗೆ ವಿವಿಧ ಸರ್ವೆ ನಂಬರ್‌ಗಳಲ್ಲಿ 808 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೇ 15ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಇದೇ ಜಾಗವನ್ನು 5–11–2011ರಲ್ಲಿ ಕೃಷಿ ವಲಯದಿಂದ ವಾಣಿಜ್ಯ (ರೆಸಾರ್ಟ್‌ ನಿರ್ಮಾಣ) ಬಳಕೆಗೆ ಭೂಪರಿವರ್ತನೆ ಮಾಡಲಾಗಿದೆ ಎಂದೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಗಳ ನಾಶಕ್ಕೆ ಅರಣ್ಯ ಅಧಿಕಾರಿಯೇ ಅನುಮತಿ ನೀಡಿದ್ದು ಅಮೂಲ್ಯ ಮರಗಳು ಕಾರ್ಮಿಕರ ಕೊಡಲಿ ಪೆಟ್ಟಿಗೆ ನೆಲಕ್ಕುರುಳಿವೆ. ಮೊನ್ನೆಯಷ್ಟೇ ಕಾಡಾಗಿದ್ದ ಪ್ರದೇಶವು, ಈಗ ಬಯಲಾಗಿ ನಿಂತಿದೆ. ವನ್ಯ ಸಂಪತ್ತು ನಾಶವಾಗಿದೆ.

‘ಬಾಣೆ ಜಮೀನನ್ನು ಸ್ವಾಧೀನದಾರರು ಮಾರಾಟ ಮಾಡುವಂತಿಲ್ಲ. ಆದರೆ, ಇಲ್ಲಿ ಸಾಗುವಳಿ ನಡೆಸಿರುವ ಕುರುಹು ಇಲ್ಲ. ಒಂದು ಕಾಫಿ ಗಿಡವನ್ನೂ ನೆಟ್ಟಿಲ್ಲ. ಕಂದಾಯ ಅಧಿಕಾರಿಗಳು ವಾಣಿಜ್ಯ ಉದ್ದೇಶದ ಮಾರಾಟಕ್ಕಾಗಿ ಅನುಕೂಲ ಕಲ್ಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು’ ಎಂದು ನಾಣಯ್ಯ ಆಗ್ರಹಿಸಿದರು.