ಮಲೆನಾಡು ಭಾಗದಲ್ಲಿ ಮಳೆ ಆರ್ಭಟ:ಸೇತುವೆ ಮುಳುಗಡೆ,ಗುಡ್ಡ ಕುಸಿತ-ಎಲ್ಲ ರೈಲುಗಳ ಸಂಚಾರ ರದ್ದು

ಮಲೆನಾಡು ಭಾಗದ ಕಳಸ,ಹೊರನಾಡು,ಕುದುರೆಮುಖ,ಮೂಡಿಗೆರೆ,ಶೃಂಗೇರಿ,ಕೊಪ್ಪ,ನರಸಿಂಹರಾಜಪುರ,ಸಕಲೇಶಪುರ ತಾಲೂಕುಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು,ತುಂಗಾ,ಭದ್ರಾ,ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಮಲೆನಾಡಿನಲ್ಲಿ ಮಳೆಯ ವೈಭವ ಮರಳಿದೆ.

ಮೂಡಿಗೆರೆಯಲ್ಲಿ ಧಾರಾಕಾರ ಮಳೆಯಿಂದ ಜನಜೀವನ ತತ್ತರಿಸಿದೆ.ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕಳಸ ಹೆಬ್ಬಾಳ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾಗಿರುವುದರಿಂದ ರಾತ್ರಿ ಕಳಸ ಹೊರನಾಡು ಸಂಪರ್ಕ ಕಡಿತವಾಗಿತ್ತು.

ಭಾರಿ ಮಳೆಯ ಪರಿಣಾಮ ಸಕಲೇಶಪುರ- ಸುಬ್ರಹ್ಮಣ್ಯ ರೋಡ್‌ ನಡುವಿನ ಘಾಟಿ ಪ್ರದೇಶದಲ್ಲಿ ರೈಲ್ವೆ ಹಳಿಯ ಮೇಲೆ ಮಂಗಳವಾರ ಮತ್ತೆ ಭೂಕುಸಿತ ಉಂಟಾದ ಪರಿಣಾಮ ಈ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಳೆ ಆರ್ಭಟ ಮುಂದುವರಿದರೆ ಯಾವುದೇ ಕ್ಷಣದಲ್ಲಿ ನದಿಗಳ ಪ್ರವಾಹ ಅಪಾಯದ ಮಟ್ಟಕ್ಕೆ ತಲುಪಲಿದೆ. ಕುದುರೆಮುಖ, ಕಳಸ, ಹೊರನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

Also read  Kerala farmers work towards protecting native black pepper

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಮಡಿಕೇರಿಯಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಬಿಟ್ಟುಬಿಟ್ಟು ಮಳೆಯಾಗಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ ಭಾಗದಲ್ಲೂ ಆಗಾಗ ಮಳೆ ಬೀಳುತ್ತಿದೆ.

ಕಳೆದ 24 ಗಂಟೆಯಲ್ಲಿ ಶೃಂಗೇರಿ ಹೋಬಳಿ-38, ಕಿಗ್ಗ ಹೋಬಳಿ-42, ಮೂಡಿಗೆರೆ ಹೋಬಳಿ-39, ಬಣಕಲ್‌ ಹೋಬಳಿ-48, ಗೋಣಿಬೀಡು ಹೋಬಳಿ-43, ಕಳಸ ಹೋಬಳಿ-29, ಜಾವಳಿ ಹೋಬಳಿ-15, ನರಸಿಂಹರಾಜಪುರ ಹೋಬಳಿ-13, ಬಾಳೆಹೊನ್ನೂರು ಹೋಬಳಿ-16, ಕೊಪ್ಪ ಹೋಬಳಿ-31, ಹರಿಹರಪುರ ಹೋಬಳಿ-38, ಮೇಗುಂದ ಹೋಬಳಿ-22ಮಿ.ಮೀ ಮಳೆಯಾಗಿದೆ.

Also read  ಬೆಳಗಾವಿ ಜಿಲ್ಲೆಯ ಹಲವೆಡೆ ಗುಡುಗು ಮಿಶ್ರಿತ ಆಲಿಕಲ್ಲು ಮಳೆ

ಸಿರಿಬಾಗಿಲು ಮತ್ತು ಸುಬ್ರಹ್ಮಣ್ಯ ರೋಡ್‌ ನಡುವೆ ಭಾರಿ ಮಳೆಯಾಗಿದ್ದು, ಹಳಿ ಪಕ್ಕದ ಗುಡ್ಡದಿಂದ ಮಣ್ಣು ಮತ್ತು ಬಂಡೆಗಳು ಜತೆಯಾಗಿ ಕುಸಿದು ಕೆಳಗೆ ಬಿದ್ದಿದೆ ಎಂದು ನೈಋುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದೆ. ರೈಲ್ವೆ ಕಾರ್ಮಿಕರು ಹಾಗೂ ಅಧಿಕಾರಿಗಳು ಹಳಿ ಮೇಲಿನ ತಡೆಯನ್ನು ತೆರವುಗೊಳಿಸುವ ಕೆಲಸದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

ಕಾರವಾರ- ಯಶವಂತಪುರ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು (ನಂ.16516) ಮಂಗಳವಾರ ಸಕಲೇಶಪುರ ಮತ್ತು ಯಶವಂತಪುರ ನಡುವಿನ ಪ್ರಯಾಣವನ್ನು ರದ್ದುಗೊಳಿಸಿದೆ.
ಯಶವಂತಪುರ- ಮಂಗಳೂರು ಸೆಂಟ್ರಲ್‌ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು (ನಂ.16585) ಮತ್ತು ಬೆಂಗಳೂರು- ಕಾರವಾರ/ ಕಣ್ಣೂರು ರಾತ್ರಿ ಎಕ್ಸ್‌ಪ್ರೆಸ್‌ (ನಂ.16523/ 16517) ಮಂಗಳವಾರ ಸೇಲಂ, ಈರೋಡ್‌, ಪಾಲಕ್ಕಾಡ್‌ ಮತ್ತು ಶೊರ್ನೂರು ಮಾರ್ಗವಾಗಿ ಸಂಚರಿಸಿದೆ. ಕಣ್ಣೂರು/ ಕಾರವಾರ- ಬೆಂಗಳೂರು ರಾತ್ರಿ ಎಕ್ಸ್‌ಪ್ರೆಸ್‌ (ನಂ.16512/ 16514) ಮಂಗಳವಾರ ಶೊರ್ನೂರು, ಪಾಲಕ್ಕಾಡ್‌, ಈರೋಡ್‌ ಮಾರ್ಗ ಸಂಚರಿಸಿದೆ.

Also read  24hrs Rain Map of Karnataka – 27 June 2018