ಬಿಸಿಲಿನ ತಾಪ ಏರಿಕೆ: ಇದೇ 7 ಮತ್ತು 8ರಂದು ಭಾರಿ ಮಳೆ ಸಾಧ್ಯತೆ,‘ಯೆಲ್ಲೊ ಅಲರ್ಟ್’

ಬೇಸಿಗೆ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ವೇಳೆಯಲ್ಲಿ ಇದೇ 7 ಮತ್ತು 8ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಆರ್ದ್ರತೆಯಲ್ಲಿ ಏರುಪೇರು ಹಾಗೂ ತಾಪಮಾನದಲ್ಲಿ ನಿರಂತರ ಏರಿಕೆ ಕಾಣುತ್ತಿರುವುದರಿಂದ ಮಳೆಯಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಎರಡು ದಿನಗಳು ಮಳೆಯಾಗುವ ಸೂಚನೆ ಇದೆ’ಮುಂದಿನ ದಿನಗಳಿಗೂ ವಿಸ್ತರಣೆಯಾಗಬಹುದು ಎಂದು ಹಮಾವಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಹೇಳಿದ್ದಾರೆ.

ಹದಿನೈದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 35 ಡಿಗ್ರಿ ಸೆಲ್ಸಿಯಸ್‍ನಿಂದ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್‍ಗಳವರೆಗೆ ತಾಪಮಾನ ದಾಖಲಾಗಿದೆ. ಮುಂದಿನ ವಾರದಲ್ಲಿ ಇದರ ಪ್ರಮಾಣ ಮತ್ತಷ್ಟು ಏರಲಿದ್ದು, ಈ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.

Also read  Arabica Coffee Prices at 5 Weeks High

ಏ.7ರಂದು ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. 8ರಂದು ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸುರಿಯಲಿದೆ.

ವಿಜಯಪುರ ಜಿಲ್ಲೆಯ ತಿಕೋಟಾ,ನಾಲತವಾಡ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಅರ್ಧ ತಾಸಿಗೂ ಅಧಿಕ ಹೊತ್ತು ಮಳೆ ಸುರಿಯಿತು.

ನಾಪೋಕ್ಲು (ಕೊಡಗು) ಪಟ್ಟಣ ಹಾಗೂ ಸಮೀಪದ ಕೊಳಕೇರಿ, ಕುಂಜಿಲ, ಕಕ್ಕಬ್ಬೆ ಭಾಗದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ.ಬಿರುಸಿನ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ. ಮಾರ್ಚ್‌ನಲ್ಲಿ ಕಾಫಿಗೆ ಹೂಮಳೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ಸುರಿದಿರುವ ಮಳೆ ಬ್ಯಾಕಿಂಗ್ ಮಳೆಯಾಗಿದ್ದು ಕಾಫಿ ಇಳುವರಿಗೆ ಪೂರಕವಾಗಲಿದೆ ಎಂದು ಬೇತು ಗ್ರಾಮದ ಕಾಫಿ ಬೆಳೆಗಾರ ಕಾವೇರಪ್ಪ ಹೇಳಿದರು.

ವಿಜಯಪುರ ಜಿಲ್ಲೆಯ ತಿಕೋಟಾ, ನಾಲತವಾಡ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಅರ್ಧ ತಾಸಿಗೂ ಅಧಿಕ ಹೊತ್ತು ಮಳೆ ಸುರಿಯಿತು. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಗುಡುಗು,ಸಿಡಿಲು ಆರಂಭವಾಗಿದೆ.

ಬಾಗಲಕೋಟೆ  ಜಿಲ್ಲೆಯ ಹಲವು ಭಾಗದಲ್ಲಿ ಶನಿವಾರ ಮಧ್ಯಾಹ್ನ ಮಳೆ ಆಗಿದೆ . ಕಳೆದೆರಡು ದಿನದಿಂದ ಬಿಸಿಲಿನ ಬೇಗೆಯಿಂದ ಬೆಂಡಾದ ಜನತೆಗೆ ಶನಿವಾರ ಸುರಿದ ಮಳೆ ಅಲ್ಪ ಮಟ್ಟಿನ ತಂಪು ನೀಡಿದೆ.

ಹುಬ್ಬಳ್ಳಿ  ಅವಳಿ ನಗರದ ಕೆಲವಡೆ ಶನಿವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಮಳೆ ಬಿದ್ದಿದ್ದು, ಬಿಸಿಲಿನ ತಾಪದಿಂದ ಕೆಂಗೆಟ್ಟ ಜನತೆಗೆ ತಂಪನ್ನೆರೆದಿದೆ. ಶನಿವಾರ ಸಂಜೆಯಿಂದಲೇ ಗುಡುಗು ಆರಂಭವಾಗಿ, ಸಂಜೆ 6 ಗಂಟೆ ಸುಮಾರಿಗೆ ನಗರದ ಉಣಕಲ್‌, ಗೋಕುಲ ಗ್ರಾಮ, ವಿಮಾನ ನಿಲ್ದಾಣ ಪ್ರದೇಶದಲ್ಲಿಸುಮಾರು 15 ನಿಮಿಷಗಳ ಕಾಲ ಮಳೆ ಸುರಿಯಿತು. ಅದೇ ರೀತಿ ಧಾರವಾಡದಲ್ಲಿಯೂ ಶನಿವಾರ ಮಧ್ಯಾಹ್ನವೇ ಮಳೆ ಬಿದ್ದು ತಂಪು ವಾತಾವರಣ ಸೃಷ್ಟಿಸಿತು.

Also read  Rainfall Forecast for next 24 hrs:Heavy to very heavy rains over Coastal Karnataka and Malanad districts