ದಾಖಲೆ ದರದತ್ತ ಶುಂಠಿ ಬೆಳೆ

ಶುಂಠಿ ಬೆಳೆಗಾರರಿಗೆ ಈ ಬಾರಿ ಅದೃಷ್ಟ ಒಲಿದಿದೆ. ಸದ್ಯದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕಡೆ ಮುಖ ಮಾಡಿರುವ ಶುಂಠಿ ಪ್ರತಿ ಕ್ವಿಂಟಲ್‌ಗೆ ₹ 9 ಸಾವಿರದಿಂದ ₹ 9,500ರಂತೆ ಬಿಕರಿಯಾಗುತ್ತಿದೆ.

ಮಲೆನಾಡು ಭಾಗದಲ್ಲಿ ಸುಮಾರು ಐದು ದಶಕಗಳಿಂದ ನೆಲೆ ಕಂಡುಕೊಂಡಿರುವ ಶುಂಠಿ ಬೆಳೆಯು ವಿಪರೀತ ಮಳೆ, ಪ್ರಕೃತಿ ವಿಕೋಪ ಹಾಗೂ ಹಲವು ರೋಗಗಳಿಗೆ ತುತ್ತಾಗುತ್ತದೆ. ನಾಲ್ಕಾರು ವರ್ಷಗಳಿಗೊಮ್ಮೆ ಮಾತ್ರ ಉತ್ತಮ ಧಾರಣೆ ಲಭಿಸುತ್ತದೆ.

ಕೇರಳ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕೊಳೆ ರೋಗಕ್ಕೆ ತುತ್ತಾಗುವುದರಿಂದ ಶುಂಠಿ ಬೆಳೆಯುವ ಉತ್ಸಾಹವನ್ನು ರೈತರು ಕಳೆದುಕೊಂಡಿದ್ದರು. ಮೂರು ವರ್ಷಗಳಿಂದ ಶುಂಠಿ ಬೆಳೆಗೆ ಹೆಚ್ಚಿನ ಧಾರಣೆಯೂ ಸಿಕ್ಕಿಲ್ಲ.

Also read  ಭಾರಿ ಮಳೆಯ ನಡುವೆಯೂ ಹೆಚ್ಚಾದ ಭಾರತದ ಕಾಫಿ ಉತ್ಪಾದನೆ

ಹೀಗಾಗಿ ಶುಂಠಿ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದೇ ಹೆಚ್ಚು.

ನಿರಂತರವಾಗಿ ಬೆಲೆ ಕುಸಿತ ಕಾಣುತ್ತಿರುವ ಶುಂಠಿಯನ್ನು ಬೆಳೆಯದೇ ಇರುವುದೇ ಲೇಸು ಎಂಬ ನಿರ್ಧಾರಕ್ಕೂ ಹಲವು ರೈತರು ಬಂದಿದ್ದರು. ಆದರೆ, ಕಳೆದ ಬೇಸಿಗೆಯಲ್ಲಿ ಹಸಿ ಶುಂಠಿ ಕ್ವಿಂಟಲ್ ಒಂದಕ್ಕೆ ದಿಢೀರನೆ ₹ 8 ಸಾವಿರಕ್ಕೆ ಏರಿ ರೈತರ ಮೊಗದಲ್ಲಿ ನಗು ಮೂಡಿಸಿತ್ತು. ಒಂದೇ ವಾರದಲ್ಲಿ ₹ 3 ಸಾವಿರಕ್ಕೆ ಕುಸಿದು ಮತ್ತೆ ಮೇಲೇರಿರಲಿಲ್ಲ. ಬೆಲೆ ಇನ್ನೂ ಏರಲಿದೆ ಎಂಬ ಸೂಚನೆ ದೊರಕಿದ ಕಾರಣಕ್ಕೆ ಹೆಚ್ಚಿನ ರೈತರು ಶುಂಠಿ ಬೆಳೆಯ ಆರೈಕೆಯಲ್ಲಿ ಮಗ್ನರಾಗಿದ್ದಾರೆ.

Also read  Black pepper prices slips on selling pressure

ಶುಂಠಿ ಮಡಿಯೊಳಗಿನ ಮಣ್ಣಲ್ಲಿ ಹದವಾಗಿ ಉಳಿದ ಬೆಳೆಯನ್ನು ಹಾಗೆಯೇ ಉಳಿಸಿಕೊಂಡು ಉತ್ತಮ ಬೆಲೆಗೆ ಮಾರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶೇ 70ರಷ್ಟು ಭಾಗದಲ್ಲಿ ಬೆಳೆದ ಬೆಳೆಯನ್ನು ಈಗಾಗಲೇ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ರೈತರು ದಿಢೀರನೆ ಶುಂಠಿ ಬೆಲೆ ಹೆಚ್ಚಾಗಿರುವುದರಿಂದ ಬೇಸರಗೊಂಡಿದ್ದಾರೆ.

ಕೇರಳದಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಶುಂಠಿ ಬೆಳೆ ಮಹಾಕಾಳಿ ರೋಗಕ್ಕೆ ತುತ್ತಾಗಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಬೇಡಿಕೆ ಹೆಚ್ಚಾಗಿದೆ. ಶುಂಠಿ ಫಸಲನ್ನು ಉಳಿಸಿಕೊಂಡ ರೈತರಿಗೆ ಬಂಪರ್ ಬೆಲೆ ಲಭಿಸಿದೆ ಎಂಬ ಅಭಿಪ್ರಾಯ ಬೆಳೆಗಾರರಿಂದ ವ್ಯಕ್ತವಾಗಿದೆ.

Source:Prajavani

Also read  ಅಪರೂಪದ ಸೌತೆಕಾಯಿ ತಳಿ ಮಗೆಕಾಯಿ ಮತ್ತು ರುಚಿಕರ ವೈವಿಧ್ಯ ಅಡುಗೆಗಳು