ಕಾಫಿ ಉದ್ಯಮಕ್ಕೆ ಹೊಸತನ ತಂದುಕೊಟ್ಟಿದ್ದ ಓರ್ವ ಕನಸುಗಾರ ಸಿದ್ಧಾರ್ಥ್

ಕಾಫಿ ಬೆಳೆಗಾರ ಉದ್ಯಮಿ ವಿ.ಜಿ.ಸಿದ್ದಾರ್ಥ್ ಅವರು ಕಾಫಿ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದವರು.ಚಿಕ್ಕಮಗಳೂರಿನ ಕಾಫಿ ಪರಿಮಳವನ್ನು ಬ್ರಾಂಡ್ ಆಗಿ ಜಗತ್ತಿಗೆ ಪರಿಚಯಿಸುವಲ್ಲಿ ಅವರು ನೀಡಿದ ಕೊಡುಗೆ ಅನನ್ಯ.

ಕಾಫಿ ಬೆಳೆಯುವ ರೀತಿ,ಮಾರಾಟ ಮತ್ತು ಖರೀದಿಯಲ್ಲಿ ತಮ್ಮದೇ ಸೂತ್ರಗಳನ್ನು ಅಳವಡಿಸಿ ಉದ್ಯಮಕ್ಕೆ ಹೊಸತನ ತಂದುಕೊಟ್ಟಿದ್ದರು.

ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು,ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು.ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಗೌತಹಳ್ಳಿಯ (ಚೇತನಹಳ್ಳಿ ಎಸ್ಟೇಟ್‌) ಗಂಗಯ್ಯ ಹೆಗ್ಡೆ ಮತ್ತು ವಾಸಂತಿ ದಂಪತಿ ಪುತ್ರ ಸಿದ್ದಾರ್ಥ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪುತ್ರಿ ಮಾಳವಿಕಾ ಅವರನ್ನು ಮದುವೆಯಾಗಿದ್ದರು.

ಚಿಕ್ಕಮಗಳೂರು ನಗರದಲ್ಲಿ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ ಘಟಕ, ಸೆರಾಯ್‌ ಐಷಾರಾಮಿ ಹೋಟೆಲ್‌ ಮತ್ತು ಆ್ಯಂಬರ್‌ ವ್ಯಾಲಿ ಶಾಲೆ ಹಾಗೂ ಜಿಲ್ಲೆಯ ವಿವಿಧೆಡೆ ಕಾಫಿ ತೋಟಗಳು ಅವರ ಒಡೆತನದಲ್ಲಿ ಇವೆ.

ಆರಂಭದ ದಿನಗಳಲ್ಲಿ ಸಿದ್ದಾರ್ಥ ಒಬ್ಬ ಸಾಮಾನ್ಯ ಬೆಳೆಗಾರರಾಗಿದ್ದರು. ಕೆಫೆ ಕಾಫಿ ಡೇ ಸ್ಥಾಪಿಸಿ ಕಾಫಿ ಘಮಲನ್ನು ವಿಶ್ವದೆಲ್ಲೆಡೆ ಪಸರಿಸಿದರು. ಚಿಕೋರಿ ರಹಿತ ಶುದ್ಧ ಕಾಫಿ ಪೇಯವನ್ನು ಈ ಕೆಫೆಗಳಲ್ಲಿ ಸಿಗುವಂತೆ ಮಾಡಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟರು.

ಕಾಫಿಯ ಮೌಲ್ಯವರ್ಧನೆಗೆ ಒತ್ತು ನೀಡುವುದರೊಂದಿಗೆ,ಬೆಳೆಗಾರರಿಗೆ ವಿವಿಧೆಡೆಗಳಿಂದ ಹೊಸ ತಳಿಗಳನ್ನು ಪರಿಚಯಿಸಿದರು. ನಾವು ಬೆಳೆದ ಬೆಳೆ,ನಾವು ಸಿದ್ಧಪಡಿಸಿದ ಪದಾರ್ಥಗಳನ್ನು ನಾವೇ ಮಾರಾಟ ಮಾಡಲು ದಾರಿ ಕಂಡುಕೊಳ್ಳಬೇಕು ಎಂಬುದು ಅವರ ಸಿದ್ಧಾಂತ. 1993ರಲ್ಲಿ ಅಮಾಲ್ಗಮೇಟೆಡ್‌ ಬೀನ್‌ ಕಂಪೆನಿ ಲಿಮಿಟೆಡ್‌ (ಎಬಿಸಿಎಲ್‌) ಸ್ಥಾಪಿಸಿದರು. ಕಾಫಿ ಬೆಳೆಯುವ,ಬಳಕೆಯಾಗುವ ಬಹುತೇಕ ಕಡೆ ಈ ಸಂಸ್ಥೆಯ ಶಾಖೆಗಳು ಇದ್ದವು.

‘ಕಾಫಿ ಬೆಳೆಗಾರರು ಬೆಳೆದುದೆಲ್ಲವನ್ನೂ ಒಮ್ಮೆಲೆ ಮಾರಬಾರದು. ಬೆಲೆ ಗಮನಿಸಿ ಮಾರಾಟ ಮಾಡಬೇಕು ಎಂಬುದು ಅವರು ಹೇಳುತ್ತಿದ್ದ ಕಿವಿಮಾತು. ಎಬಿಸಿಯಲ್ಲಿ ಬೆಳೆಯನ್ನು ಮಾರಾಟ ಮಾಡದೇ ವ್ಯಾಪಾರ ಒಪ್ಪಂದ ಮಾಡಿಕೊಂಡು ಇರಿಸಲು (ಕನ್‌ಸೈನ್‌ಮೆಂಟ್‌) ಅವಕಾಶ ಇತ್ತು. ಎಬಿಸಿಗೆ ಕಾಫಿ ಮಾರಿದರೆ ದುಡ್ಡು ಪಕ್ಕಾ ಎಂಬುದು ಜನಜನಿತವಾದ ಮಾತು.‘

ಚಿಕ್ಕಮಗಳೂರಿನ ಕಾಫಿ ಪರಿಮಳ ಹೇಗೆ ಮೂಗರಳಿಸಿ, ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆಯೇ ಹಾಗೆಯೇ ಚಿಕ್ಕಮಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಕಾರು ರ‍್ಯಾಲಿಯೂ ರ‍್ಯಾಲಿಪ್ರಿಯರ ಕಣ್ಣರಳುವಂತೆ ಮಾಡುತ್ತದೆ. ಅಂತಹ ಕಾರು ರ‍್ಯಾಲಿ ಸಂಘಟಿಸುವ ‘ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌’ ಹಿಂದೆ ಇರುವ ಪ್ರೇರಕ ಶಕ್ತಿ ಸಿದ್ಧಾರ್ಥ ಹೆಗ್ಡೆ ಎಂದರೆ ಅದು ಅತಿಶಯವೆನಿಸುವುದಿಲ್ಲ. ಪ್ರವಾಸೋದ್ಯಮ ಬೆಳವಣಿಗೆಗೆ, ಕ್ರೀಡಾ ಚಟುವಟಿಕೆಗಳಿಗೆ ಅವರು ನೀಡಿರುವ ಪ್ರೋತ್ಸಾಹವನ್ನು ಜಿಲ್ಲೆಯ ಜನರಷ್ಟೇ ಅಲ್ಲ, ಹೊರಗಿನವರೂ ಪ್ರೀತಿಯಿಂದ ಸ್ಮರಿಸುತ್ತಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಐಎನ್‌ಆರ್‌ಸಿ, ಎಪಿಆರ್‌ಸಿ ರ‍್ಯಾಲಿಗಳು ರ‍್ಯಾಲಿಪ್ರಿಯರ ಮಾತಿನಲ್ಲಿ, ಕಣ್ಣಿನಲ್ಲಿ ‘ಕಾಫಿ ಡೇ ರ‍್ಯಾಲಿ’ ಎಂದೇ ಗುರುತಿಸಿಕೊಂಡಿವೆ.

ದೇಶಕ್ಕಾಗಿ ದುಡಿದು, ತೆರಿಗೆ ಕಟ್ಟಿದರೂ ಬೆಲೆ ಇಲ್ಲ ಎಂಬುದು ಅವರ ಮನಸ್ಸಿಗೆ ಬಂದಿತ್ತು. ಸಿದ್ಧಾರ್ಥ್ ಶಿಸ್ತು ಸಂಯಮದ ವ್ಯಕ್ತಿ. ಬಹಳ ತಾಳ್ಮೆಯಿಂದ ವರ್ತಿಸುತ್ತಿದ್ದರು. ಗ್ರಾಮೀಣ ಮತ್ತು ಗುಡ್ಡಗಾಡು ಜನಕ್ಕೆ ಉದ್ಯೋಗ ಕೊಟ್ಟ ಮಹಾನೀಯ. ಐಟಿ ದಾಳಿಯ ನಂತರ ಸಿದ್ಧಾರ್ಥ ಕುಗ್ಗಿದ್ದರು.

ಸಿದ್ದಾರ್ಥ ಓರ್ವ ಕನಸುಗಾರ.ಬೆಳೆಗಾರರೊಂದಿಗೆ ಉತ್ತಮ ಬಾಂಧವ್ಯ ಇತ್ತು.ದೊಡ್ಡಮಟ್ಟಕ್ಕೆ ಬೆಳೆದಿದ್ದರು.ಸಿದ್ಧಾರ್ಥ್ ಅವರು ಚಿಕ್ಕಮಗಳೂರು, ಕರ್ನಾಟಕದ ಆಸ್ತಿ.ಅನೇಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ.ಅವರು ವಾಪಸ್ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ .

Also read  Black pepper prices stays firm on tight supply