ಗೂಡ್ಸ್ ರೈಲಿಗೆ ಸಿಲುಕಿ ಮರಿಯಾನೆಗಳ ಮರಣ: ಸಾವಿಗೆ ಕಂಬನಿ ಮಿಡಿದ ಹಿಂಡಾನೆಗಳು

ಸಕಲೇಶಪುರ: ಪಶ್ಚಿಮಘಟ್ಟವನ್ನು ಸೀಳಿಕೊಂಡು ಹೋಗಿರುವ ಸಕಲೇಶಪುರ– ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಎರಡು ಕಾಡಾನೆ ಮರಿಗಳು ಮೃತಪಟ್ಟಿದ್ದಕ್ಕೆ ತಾಯಿ ಆನೆ ಮತ್ತು ಗುಂಪಿನ ಇತರೆ ಆನೆಗಳು ಕಂಬನಿ ಮಿಡಿದಿದ್ದು, ಆಕ್ರೋಶ ವ್ಯಕ್ತ ಪಡಿಸಿವೆ.

ಮರಿ ಆನೆಗಳ ಸಾವಿನಿಂದ ಕಂಗೆಟ್ಟ ಇತರೆ ಆನೆಗಳು ಘಟನೆ ನಡೆದ ಪ್ರದೇಶದಲ್ಲಿ ಮರಗಿಡಗಳು, ಕೊಂಬೆಗಳನ್ನು ಮುರಿದು ಸಿಟ್ಟು ವ್ಯಕ್ತಪಡಿಸಿರುವುದು ಕಂಡು ಬಂದಿದೆ.

‘ಆನೆಗಳ ಶವ ಪರೀಕ್ಷೆ ನಂತರ ಅಂತಿಮ ಸಂಸ್ಕಾರ ನಡೆಸುತ್ತಿದ್ದ ಸ್ಥಳದಿಂದ ಕೂಗಳತೆ ದೂರದಲ್ಲಿ ಆನೆಗಳು ಘೀಳಿಡುತ್ತಾ ಆಕ್ರೋಶ, ದುಃಖ ವ್ಯಕ್ತಪಡಿಸುತ್ತಿದ್ದುದು ಮನಸ್ಸು ಹಿಂಡುವಂತಿತ್ತು’ ಎಂದು ವಲಯ ಅರಣ್ಯ ಅಧಿಕಾರಿ ಮೋಹನ್‍ ತಿಳಿಸಿದರು.

‘ಶವಸಂಸ್ಕಾರ ನಡೆದ ಸ್ಥಳದಲ್ಲಿ ಮರುದಿನ ಆನೆಗಳು ಬೀಡುಬಿಟ್ಟು ಮಣ್ಣು ಕೆರೆದು ಹೋಗಿವೆ. ಮನುಷ್ಯ ಮಾತ್ರವಲ್ಲ, ನಮಗೂ ನಮ್ಮವರನ್ನು ಕಳೆದುಕೊಂಡಾಗ ದುಃಖವಾಗುತ್ತದೆ, ಸಿಟ್ಟು ಬರುತ್ತದೆ ಎಂಬುದನ್ನು ತೋರಿಸಿವೆ’ ಎಂದು ಹೇಳಿದರು.

ತಾಲ್ಲೂಕು ವ್ಯಾಪ್ತಿಯ ಪಶ್ಚಿಮಘಟ್ಟದ ಕೆಂಚನಕುಮರಿ ಹಾಗೂ ಕಾಗಿನಹರೆ ರಕ್ಷಿತ ಅರಣ್ಯ ಪ್ರದೇಶದ ಸುಮಾರು 25 ಕಿ.ಮೀ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಕ್ಷಿತ ಅರಣ್ಯವೂ ಸೇರಿದಂತೆ ಸುಮಾರು 40 ಕಿ.ಮೀ ಉದ್ದ ಅರಣ್ಯ ಪ್ರದೇಶದಲ್ಲಿ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗ ಹಾದು ಹೋಗುತ್ತದೆ. ಈ ಪ್ರದೇಶ ಏಷ್ಯಾ ಖಂಡದಲ್ಲಿ ಜೀವ ವೈವಿಧ್ಯದಿಂದ ಕೂಡಿದ ಅತ್ಯಂತ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.

ರೈಲ್ವೆ ಅಧಿಕಾರಿಗಳೇ ಕಾರಣ: ಸುಮಾರು 15 ಆನೆಗಳ ಗುಂಪು ಕಾಡಿನ ಒಂದು ಬದಿಯಿಂದ ಮತ್ತೊಂದು ಬದಿಗೆ ಆಹಾರ ಹುಡುಕಿಕೊಂಡು ಹೊರಟ ಸಂದರ್ಭದಲ್ಲಿ ಮರಿ ಆನೆಗಳು ಮೃತಪಟ್ಟಿರುವ ಸಾಧ್ಯತೆ ಇದೆ. ರಕ್ಷಿತ ಅರಣ್ಯದಲ್ಲಿ ಹಾದು ಹೋಗಿರುವ ರೈಲು ಮಾರ್ಗದಲ್ಲಿ, ವನ್ಯ ಜೀವಿಗಳ ಸಂರಕ್ಷಣೆಗೆ ರೈಲ್ವೆ ಇಲಾಖೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದಕ್ಕೆ ಕಾರಣ ಎಂದು ಹೆಸರು ಹೇಳದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮುಂಜಾಗ್ರತಾ ಕ್ರಮ ಅಗತ್ಯ: ಆನೆ ಹಾಗೂ ವನ್ಯ ಜೀವಿಗಳ ಕಾರಿಡಾರ್‌ಗಳನ್ನು ಗುರುತಿಸಿ ರೈಲು ಕಂಬಿಗಳಿಂದ ಬ್ಯಾರಿಕೇಡ್ ಹಾಗೂ ತಂತಿ ಬೇಲಿಗಳನ್ನು ನಿರ್ಮಾಣ ಮಾಡಬೇಕು. ಬೆಟ್ಟಗಳನ್ನು ಸೀಳಿ ತಗ್ಗು ಪ್ರದೇಶದಲ್ಲಿ ಹಾದು ಹೋಗಿರುವ ರೈಲು ಮಾರ್ಗದಲ್ಲಿ ವಿದೇಶಗಳಲ್ಲಿರುವಂತೆ ಅಗಲವಾದ ಮೇಲ್ಸೇತುವೆಗಳನ್ನು ನಿರ್ಮಿಸಿ ಗಿಡಗಳನ್ನು ಬೆಳೆಸಬೇಕು. ಸೇತುವೆಗಳ ಕೆಳಭಾಗದಲ್ಲಿಯೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಾಣಿಗಳು ಮುಕ್ತವಾಗಿ ಸಂಚರಿಸುವಂತೆ ಮಾಡಬೇಕು. ಇಂತಹ ಹಲವು ಮುಂಜಾಗ್ರತಾ ಕ್ರಮಗಳನ್ನು ರೈಲ್ವೆ ಅಧಿಕಾರಿಗಳು ಕೈಗೊಳ್ಳಬೇಕು. ಇಲ್ಲವಾದರೆ ಕಾಡಾನೆ ಹಾಗೂ ವನ್ಯ ಜೀವಿಗಳ ಸಾವು ತಪ್ಪಿಸಲು ಸಾಧ್ಯವಿಲ್ಲ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್ ಸಲಹೆ ನೀಡುತ್ತಾರೆ.

ಪ್ರಜಾವಾಣಿ 

Also read  Vietnam pepper industry faces oversupply and quality problems