CoffeeFeatured NewsKrushi

ಪರಿಸರ ಸ್ನೇಹಿ ಕಾಫಿ ಪಲ್ಪಿಂಗ್‌ ಘಟಕಕ್ಕೆ ಬೇಡಿಕೆ

ಪರಿಸರ ಸ್ನೇಹಿ ಕಾಫಿ ಪಲ್ಪಿಂಗ್‌ ಘಟಕಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಸೋಮವಾರಪೇಟೆ ತಾಲೂಕಿನ ಬಹುಪಾಲು ಸಣ್ಣ ಕಾಫಿ ಬೆಳೆಗಾರರು ಈ ಘಟಕವನ್ನೇ ಅವಲಂಬಿಸುತ್ತಿದ್ದಾರೆ.ಇದರಿಂದ ನೀರಿನ ಮಿತಬಳಕೆಯಾಗುತ್ತಿದೆ. ಅಲ್ಲದೆ, ಪರಿಸರ ಸಂರಕ್ಷ ಣೆಗೂ ತನ್ನದೇ ಆದ ಕೊಡುಗೆ ನೀಡುತ್ತಿದೆ. 

ಕಾಫಿ ಮಂಡಳಿ ಸಹಕಾರದಿಂದ ದೇಶದಲ್ಲೇ ಪ್ರಥಮವಾಗಿ, ಸ್ವಸಹಾಯ ಸಂಘದ ಮೂಲಕ ತಾಲೂಕಿನ ಹಿರಿಕರ ಗ್ರಾಮದಲ್ಲಿ ಆರಂಭಿಸಿರುವ ಬ್ರೆಜಿಲ್‌ ತಂತ್ರಜ್ಞಾನದ ಪರಿಸರ ಸ್ನೇಹಿ ಕಾಫಿ ಪಲ್ಪಿಂಗ್‌ ಘಟಕ ಗ್ರಾಮದ ಸಣ್ಣ ಕಾಫಿ ಬೆಳೆಗಾರರಿಗೆ ವರದಾನವಾಗಿದೆ. ಹೆಚ್ಚಿನ ಬೆಳೆಗಾರರು ಈ ಘಟಕದತ್ತ ಒಲವು ತೋರಿದ್ದು, ಇದೀಗ ತಾಲೂಕಿನಲ್ಲಿ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿವೆ. 

ಶೇ.90ರಷ್ಟು ಮಂದಿ ಅವಲಂಬನೆ: 
ಸೋಮವಾರಪೇಟೆಯಿಂದ 12 ಕಿ.ಮೀ.ದೂರದ ಹಿರಿಕರ ಗ್ರಾಮದ ಬಸವೇಶ್ವರ ಸ್ವಸಹಾಯ ಸಂಘದ ಮೂಲಕ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ 2014ರಲ್ಲಿ ಇಕೊ ಪಲ್ಪಿಂಗ್‌ ಘಟಕ ಪ್ರಾರಂಭವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಸುತ್ತಮುತ್ತಲಿನ ಶೇ.90ರಷ್ಟು ಸಣ್ಣ ಕಾಫಿ ಬೆಳೆಗಾರರು ಪರಿಸರ ಸ್ನೇಹಿ ಘಟಕವನ್ನು ಅವಲಂಬಿಸಿದ್ದಾರೆ. 

ಗ್ರಾಮದಲ್ಲಿ ಇಕೊ ಪಲ್ಪಿಂಗ್‌ ಘಟಕವನ್ನು ಸ್ಥಾಪಿಸಲು ಪ್ರಾರಂಭದಲ್ಲಿ ಸಮಸ್ಯೆಯಾಗಿತ್ತು. ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗಿತ್ತು. ಆದರೆ, ಗ್ರಾಮದ ಯುವಕರ ತಂಡ ಧೈರ್ಯ ಮಾಡಿ, ಸ್ವಸಹಾಯ ಸಂಘದಿಂದ 20 ಲಕ್ಷ ರೂ. ವಿನಿಯೋಗಿಸಿದರು. ನಂತರ ಕಾಫಿ ಮಂಡಳಿಯಿಂದ 4 ಲಕ್ಷ ರೂ.ಸಬ್ಸಿಡಿ ಸಿಕ್ಕಿದೆ. ಕಡಿಮೆ ಬೆಲೆಯಲ್ಲಿ ಪಲ್ಪಿಂಗ್‌ ಮಾಡಿಕೊಡಲಾಗುತ್ತಿದೆ.-ಕೀರ್ತಿ ಮುತ್ತಣ್ಣ, ಕಾರ್ಯದರ್ಶಿ, ಬಸವೇಶ್ವರ ಕಾಫಿ ಬೆಳೆಗಾರರ ಸ್ವಸಹಾಯ ಸಂಘ.

ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿದ ಮಹಾಮಳೆಯಿಂದ ಕಾಫಿ ಫಸಲಿಗೆ ಹಾನಿಯಾಗಿತ್ತು. ಗಿಡಗಳು ರೋಗಪೀಡಿತವಾಗಿರುವುದರಿಂದ ಕಾಫಿ ಹಣ್ಣು ಗುಣಮಟ್ಟ ಕಳೆದುಕೊಂಡಿವೆ ಎನ್ನಲಾಗುತ್ತಿದೆ. ಹಣ್ಣನ್ನು ಪಲ್ಪಿಂಗ್‌ ಮಾಡಿದರೆ, ಕಾಫಿ ಬೀಜದ ತೂಕ ಕಡಿಮೆ ಬರಬಹುದು ಎಂಬ ಆತಂಕದಿಂದ ಅನೇಕ ಬೆಳೆಗಾರರು ಪಲ್ಪಿಂಗ್‌ ಮಾಡಿಸದೆ, ಹಣ್ಣು ಕಾಯಿಯನ್ನು ಒಟ್ಟಿಗೆ ಕುಯ್ಲು ಮಾಡಿ ಒಣಗಿಸುವ ತೀರ್ಮಾನಕ್ಕೆ ಬಂದಿದ್ದರು. ಅಲ್ಲದೇ ಗ್ರಾಮೀಣ ಭಾಗದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿರುವುದರಿಂದ ಕಾಫಿ ಪಲ್ಪಿಂಗ್‌ ಘಟಕಗಳನ್ನು ಚಾಲನೆ ಮಾಡಲು ಕಾಫಿ ಬೆಳೆಗಾರರು ಹಿಂದೇಟು ಹಾಕುತ್ತಿರುವುದರಿಂದ ಸಮಸ್ಯೆ ಎದುರಾಗಿತ್ತು. 

ಕಾಫಿ ಪಲ್ಪಿಂಗ್‌ ಮಾಡಲು ಸಮಸ್ಯೆ ಎದುರಾದ ಸಂದರ್ಭ, ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಕರ ಗ್ರಾಮದ ಇಕೊ ಕಾಫಿ ಪಲ್ಪಿಂಗ್‌ ಘಟಕವನ್ನು ಅವಲಂಬಿಸಿದ್ದಾರೆ. ಕಡಿಮೆ ಪ್ರಮಾಣದ ನೀರನ್ನು ಉಪಯೋಗಿಸಿ ಕಾಫಿ ಪಲ್ಪ್‌ ಮಾಡುವುದು ಹಾಗೂ ಪಲ್ಪಿಂಗ್‌ ನೀರನ್ನು ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಮರುಬಳಕೆ ಮಾಡುವುದು, ಈ ಪಲ್ಪಿಂಗ್‌ ಘಟಕದ ವಿಶೇಷ. ಅರೇಬಿಕಾ 1 ಕೆ.ಜಿ. ಕಾಫಿಯನ್ನು ಪಲ್ಪ್‌ ಮಾಡಲು ಒಂದು ಲೀಟರ್‌ ನೀರು ಸಾಕಾಗುತ್ತದೆ. ಈ ನೀರನ್ನು ಮತ್ತೆ ಮರುಬಳಕೆ ಮಾಡುವುದರಿಂದ ಮಲಿನ ನೀರು ಹೊರಹೋಗದ ಹಿನ್ನ್ನೆಲೆ ಪರಿಸರ ಮಾಲಿನ್ಯವನ್ನು ತಡೆದಂತಾಗಿದೆ. 

ಉತ್ತಮ ಗುಣಮಟ್ಟ: 
ನಾಲ್ಕು ವರ್ಷದಿಂದ ಇಕೊ ಪಲ್ಪಿಂಗ್‌ ಘಟಕ ಪ್ರಾರಂಭವಾದ ಮೇಲೆ ಬಹಳಷ್ಟು ಸಮಸ್ಯೆ ಬಗೆಹರಿದಿದೆ. ಹೊಸ ತಂತ್ರಜ್ಞಾನ ಅಳವಡಿಸಿರುವುದರಿಂದ ಕಾಫಿ ಪಾರ್ಚ್‌ಮೆಂಟ್‌ನ ಗುಣಮಟ್ಟವು ಉತ್ತಮವಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಕಾಫಿ ಪಲ್ಪಿಂಗ್‌ ಮಾಡಬಹುದಾಗಿದೆ. ಇದರಿಂದ ಸಣ್ಣ ಕಾಫಿ ಬೆಳೆಗಾರರಿಗೆ ಉಪಯೋಗವಾಗಿದೆ ಎಂದು ಹಿರಿಕರ ಗ್ರಾಮಸ್ಥರು ತಿಳಿಸಿದ್ದಾರೆ. 

ಕಾಫಿ ಮಂಡಳಿ ಸಹಕಾರದಿಂದ ಪ್ರಥಮವಾಗಿ ಹಿರಿಕರ ಗ್ರಾಮದಲ್ಲಿ ಇಕೊ ಪಲ್ಪಿಂಗ್‌ ಘಟಕ ಪ್ರಾರಂಭವಾಯಿತು. ಈಗ ತಾಲೂಕಿನ ತೋಳೂರು ಶೆಟ್ಟಳ್ಳಿ, ಕುಸೂಬೂರು, ಕಿರಗಂದೂರು ಗ್ರಾಮಗಳಲ್ಲಿ ಪಲ್ಪಿಂಗ್‌ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಘಟಕಗಳಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು. ಬೇಡಿಕೆಯಿದ್ದರೂ ಸದ್ಯಕ್ಕೆ ಇಕೊ ಪಲ್ಪಿಂಗ್‌ ಘಟಕ ನಿರ್ಮಾಣಕ್ಕೆ ಕಾಫಿ ಮಂಡಳಿಯಿಂದ ಸಹಾಯಧನ ಸೌಲಭ್ಯವಿಲ್ಲ.

Source:VijayaKarnatka

Also read  Coffee Prices (Karnataka) on 17-11-2023

Leave a Reply