CoffeeFeatured News

ಕಾಫಿ ಬೆಳೆಗಾರರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್‌ : ಸಿಎಂ ಬೊಮ್ಮಾಯಿ ಘೋಷಣೆ

ಕಾಫಿ ಬೆಳೆಗಾರರು ಬಳಸುವ 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಕಾಫಿ ಬೆಳೆಗಾರರ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರವು ಮಣಿದಿದ್ದು, ಕೊನೆಗೂ ಶುಭ ಸುದ್ದಿಯನ್ನೇ ನೀಡಿದೆ. 10 ಎಚ್‌.ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗಾಗಿ ಹಲವು ವರ್ಷದಿಂದ್ದ ಕಾದಿದ್ದ ಕಾಫಿ ನಾಡಿನ ಬೆಳೆಗಾರರಿಗೆ ಮಂಗಳವಾರ ‘ಯುಗಾದಿ ಕೊಡುಗೆ’ ನೀಡಿದೆ.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ‘ಹತ್ತು ಎಚ್‌ಪಿ ಪಂಪ್‌ಸೆಟ್‌ವರೆಗೆ ಸೀಮಿತವಾಗಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡಲು ನಮಗೆ ತಕರಾರು ಇಲ್ಲ. ಇದರಿಂದ ದುರುಪಯೋಗ ಆಗಬಾರದು. ಆದ್ದರಿಂದ ಕೆಲವು ನಿಬಂಧನೆಗಳನ್ನು ವಿಧಿಸಲಾಗುವುದು. ಅದನ್ನು ಒಪ್ಪಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರವು ಉಚಿತ ವಿದ್ಯುತ್‌ ಯೋಜನೆ ಘೋಷಿಸುವ ಮೂಲಕ ಕಾಫಿ ನಾಡಿನ ರೈತರ ಬೇಡಿಕೆ ಈಡೇರಿಸಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಕಾಫಿ ಬೆಳೆಗಾರರಿಗೆ ಹೊರತು ಪಡಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಬೆಳೆಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿತ್ತು. ವಾಣಿಜ್ಯ ಬೆಳೆಯ ಕಾರಣಕ್ಕೆ ಕಾಫಿ ಬೆಳೆಗೆ ಉಚಿತ ವಿದ್ಯುತ್‌ ನೀಡುತ್ತಿರಲಿಲ್ಲ.

ಈ ವರ್ಷ ಮಾರ್ಚ್ ಕೊನೆಯ ವಾರದಲ್ಲಿದ್ದರೂ, ಹೂವಿನ ಮಳೆಯಾಗಿಲ್ಲ. ಹೀಗಾಗಿ, ಕಾಫಿ ಬೆಳೆಗಾರರು ಸ್ಪಿಂಕ್ಲರ್‌ ಮೂಲಕ ನೀರು ಹಾಯಿಸುತ್ತಿದ್ದರು. ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ಶುಲ್ಕ ಪಾವತಿಸಿಲ್ಲ ಎಂಬ ಕಾರಣವೊಡ್ಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಸುಂಟಿಕೊಪ್ಪ ಹಾಗೂ 7ನೇ ಹೊಸಕೋಟೆ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಮಡಿಕೇರಿಯಲ್ಲೂ ಸೆಸ್ಕ್‌ ಕಚೇರಿಗೆ ಮುತ್ತಿಗೆ ಹಾಕಿದ್ದರು. ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ನೇತೃತ್ವದಲ್ಲಿ ರೈತರು ಸೋಮವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಬೆಳೆಗಾರರು ಜನವರಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಶಾಸಕ ಅಪ್ಪಚ್ಚು ರಂಜನ್‌ ಅವರ ಭರವಸೆ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಗಿತ್ತು.

”ಕಾಫಿ ವಾಣಿಜ್ಯ ಬೆಳೆಯಾಗಿದ್ದು, ಆರ್ಥಿಕವಾಗಿ ಸ್ಥಿತಿವಂತರು ಎಂಬ ಭಾವನೆಯಿಂದ 2008ರಲ್ಲಿ ಸಬ್ಸಿಡಿ ನೀಡಿಕೆಗೆ ಸೇರಿಸಿರಲಿಲ್ಲ. ಸದ್ಯ ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿರುವ ವಿದ್ಯುತ್‌ ಸಬ್ಸಿಡಿಯಿಂದ ವಾರ್ಷಿಕ 12,000- 14,000 ಕೋಟಿ ಹೊರೆಯಾಗುತ್ತಿದೆ,” ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಹೊರಡಿಸಿದ ಬೆನ್ನಲ್ಲೇ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಈ ಯೋಜನೆ ವ್ಯಾಪ್ತಿಗೆಬರುವ ಫಲಾನುಭವಿ ರೈತರ ಸಂಖ್ಯೆಯ ಮಾಹಿತಿ ಪಡೆದರು. ರಾಜ್ಯದಲ್ಲಿ ಹತ್ತು ಎಚ್‌ಪಿ ಪಂಪ್‌ಸೆಟ್‌ ಹೊಂದಿರುವ 15 ಸಾವಿರ ಬೆಳೆಗಾರರು ಇದ್ದಾರೆ. ಇವರೆಲ್ಲರನ್ನೂ ಯೋಜನಾ ವ್ಯಾಪ್ತಿಗೆ ಸೇರಿಸಲಾಗುವುದು. ಇದಕ್ಕಾಗಿ ಶೀಘ್ರವೇ ಆದೇಶ ಹೊರಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರಾದ ಎ.ಟಿ.ರಾಮಸ್ವಾಮಿ, ಸಿ.ಟಿ.ರವಿ. ಎಚ್‌.ಕೆ.ಕುಮಾರಸ್ವಾಮಿ. ಎಂ.ಪಿ. ಕುಮಾರಸ್ವಾಮಿ, ಕೆ.ಜೆ.ಬೋಪಯ್ಯ ,ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ಹಲವು ಅಧಿವೇಶನಗಳಲ್ಲಿ ಉಚಿತ ವಿದ್ಯುತ್‌ಗೆ ಒತ್ತಾಯಿಸುತ್ತಲೇ ಬರುತ್ತಿದ್ದರು.

”ಕಾಫಿ, ಮೆಣಸು, ಏಲಕ್ಕಿಗೆ ಬಳಸುವ ವಿದ್ಯುತ್‌ಗೆ ವಾಣಿಜ್ಯ ದರ ನಿಗದಿ ಸರಿಯಲ್ಲ,”-ಜೆಡಿಎಸ್‌ನ ಎ.ಟಿ.ರಾಮಸ್ವಾಮಿ

”ವಿದ್ಯುತ್‌ ಸಬ್ಸಿಡಿ ವಿಚಾರದಲ್ಲಿ ಬೆಳೆಗಾರರಲ್ಲೇ ತಾರತಮ್ಯವೇಕೆ. ಕಾಫಿ ಬೆಳೆಗಾರರನ್ನು ಒಂದು ಕಾಲದಲ್ಲಿ ಶ್ರೀಮಂತರೆನ್ನುತ್ತಿದ್ದರು. ಈಗ ಅವರು ಸಾಲಗಾರರು”-ಬಿಜೆಪಿಯ ಸಿ.ಟಿ.ರವಿ

 ”ಕಾಫಿಯಿಂದ 5000 ಕೋಟಿ ರೂ. ವಿದೇಶಿ ವಿನಿಮಯವಿದ್ದು, 25 ಲಕ್ಷ ಮಂದಿಗೆ ಉದ್ಯೋಗ ನೀಡಿದೆ” –ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ

 ”ಎರಡೇ ತಿಂಗಳು ಪಂಪ್‌ ಬಳಸುತ್ತಿದ್ದರೂ ಉಳಿದ ತಿಂಗಳಲ್ಲಿ ವಿಧಿಸುವ ಕನಿಷ್ಠ ಶುಲ್ಕವೇ ಹೊರೆಯಾಗುತ್ತಿದೆ,” –ಬಿಜೆಪಿಯ ಕೆ.ಜಿ. ಬೋಪಯ್ಯ

‘ಕಳೆದ ಹಲವಾರು ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಉಚಿತ ವಿದ್ಯುತ್ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕೆ ಕಾರಣಕರ್ತರಾದ ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು, ಇಂಧನ ಸಚಿವರು ಅಭಿನಂದನೆಗೆ ಅರ್ಹರು. ಅಲ್ಲದೇ, ನಮ್ಮ ಪ್ರತಿ ಹೋರಾಟದಲ್ಲಿ ಪಾಲ್ಗೊಂಡು ನಮಗೆ ಬೆನ್ನೆಲುಬಾಗಿ ನಿಂತ ಕಾಫಿ ಬೆಳೆಗಾರರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಗೆ ನಾವು ಕೃತಜ್ಞರಾಗಿದ್ದೇವೆ. ಇದು ನಿಜವಾಗಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಹಿತ ಕಾಯಲು ಸಹಕಾರಿಯಾದ ಯೋಜನೆ. – ದಿನೇಶ್, ಅಧ್ಯಕ್ಷ, ತಾಲ್ಲೂಕು ರೈತ ಸಂಘ, ಸೋಮವಾರಪೇಟೆ 

‘ಬೆಳೆಗಾರರಿಗೆ 10 ಎಚ್.ಪಿ ಮೋಟಾರ್ ವಿದ್ಯುತ್ ಉಚಿತ ಎಂಬ ಮುಖ್ಯಮಂತ್ರಿ ಅವರ ಘೋಷಣೆ ಕೇಳಿ ಹೊಟ್ಟೆ ತುಂಬಿದ ಅನುಭವವಾಯಿತು. ಸೋಮವಾರಪೇಟೆಯ ಸಂಪಿಗೆಕಟ್ಟೆಯಲ್ಲಿ 17 ದಿನ ಧರಣಿ ಕುಳಿತ ಬೆಳೆಗಾರರಿಗೆ ಸಿಕ್ಕಿದ ಪ್ರತಿಫಲವಿದು. ವಿದ್ಯುತ್ ಬಿಲ್ ಕಟ್ಟಲಾಗದೇ ಪರಿತಪಿಸುತ್ತಿದ್ದ ನನ್ನಂತಹ ಬೆಳೆಗಾರರಿಗೆ ಯುಗಾದಿ ಹಬ್ಬದ ಬಂಪರ್ ಲಭಿಸಿದಷ್ಟು ಸಖತ್ ಖುಷಿಯಾಗಿದೆ.- ಸಿ.ಪಿ.ಪ್ರಸನ್ನ, ಬೆಳೆಗಾರ, ನಿಲುವಾಗಿಲು ಗ್ರಾಮ, ಬೆಸೂರು ಗ್ರಾಮ ಪಂಚಾಯಿತಿ

‘ಇದೊಂದು ಕಾಫಿ ಬೆಳೆಗಾರರಿಗೆ ಸಂದ ಜಯವಾಗಿದೆ. ಕಳೆದ 2-3 ವರ್ಷಗಳಿಂದ ಕೊರೊನಾ, ಜಲಪ್ರಳಯದಿಂದ ರೈತರು ತತ್ತರಿಸಿ ಹೋಗಿದ್ದರು. ಬೆಳೆಗಾರರ 10 ಎಚ್‌ಪಿ ತನಕದ ಪಂಪ್‌ಸೆಟ್‌ಗೆ ವಿದ್ಯುತ್ ಉಚಿತ ನೀಡಿರುವುದು ಸಂತಸವಾಗಿದೆ. ಕೊಡಗಿನ ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. –ಡಾ.ಶಶಿಕಾಂತ್ ರೈ, ಕಾಫಿ ಬೆಳೆಗಾರರು, ಕಂಬಿಬಾಣೆ 

ಸಕಲೇಶಪುರಕ್ಕೆ ಕಿಂಡಿ ಅಣೆಕಟ್ಟೆ

ಸಕಲೇಶಪುರ ತಾಲ್ಲೂಕಿನಲ್ಲಿ ಕಿಂಡಿ ಅಣೆಕಟ್ಟೆ ಕಟ್ಟಲು ತಾಂತ್ರಿಕವಾಗಿ ಶಕ್ಯವಾಗಿರುವ ಸೂಕ್ತ ಸ್ಥಳಗಳನ್ನು ಗುರುತಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು. ಸಕಲೇಶಪುರದಲ್ಲಿ ಕಿಂಡಿ ಅಣೆಕಟ್ಟು ಮಾಡುವುದರಿಂದ ಅರಣ್ಯ ಪ್ರದೇಶ ನೀರಿನಲ್ಲಿ ಮುಳುಗಬಹುದು. ಅಲ್ಲದೆ ಆಳವೂ ಹೆಚ್ಚಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಆದರೂ ಕ್ಷೇತ್ರದ ಶಾಸಕರ ಬೇಡಿಕೆಯನ್ನು ತಳ್ಳಿ ಹಾಕಲು ಆಗುವುದಿಲ್ಲ. ಇದಕ್ಕೆ ಸುಮಾರು ₹8 ಕೋಟಿ ಬೇಕಾಗುತ್ತದೆ. ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದರು.

Also read  The Universal Spice - Black pepper