ಜಿಕೆವಿಕೆಯಲ್ಲಿ ನಾಳೆಯಿಂದ “ಕೃಷಿ ಮೇಳ-2019”

ರೈತರ ಜಾತ್ರೆ “ಕೃಷಿ ಮೇಳ-2019″ ಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿವೆ.ನಾಳೆ(24) ಯಿಂದ 27ರವರೆಗೆ ಕೃಷಿ ಮೇಳ ನೆಡೆಯಲಿದೆ.

ನೆರೆ ಮತ್ತು ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತ ಸಮುದಾಯಕ್ಕೆ ಪರ್ಯಾಯ ಮಾರ್ಗಗಳನ್ನು ಪರಿಚಯಿಸುವುದು ಮೇಳದ ಉದ್ದೇಶ.ಮೇಳದಲ್ಲಿ 700ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳಿರುತ್ತವೆ.12 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಕುಲಪತಿಗಳು ಮಾಹಿತಿ ನೀಡಿದ್ದಾರೆ.

ಮಣ್ಣಿನ ಗುಣಧರ್ಮ,ಪೋಷಕಾಂಶಗಳ ಲಭ್ಯತೆ,ನೀರಿನ ಲಭ್ಯತೆ ಮತ್ತು ಗುಣಮಟ್ಟ,ನೀರಿನ ಸದ್ಬಳಕೆ,ಶೇಖರಣೆ,ಕಡಿಮೆ ಪರಿಕರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವುದು,ಸೆನ್ಸರ್‌ ಆಧಾರಿತ ನೀರಾವರಿ ಪದ್ಧತಿ,ಖುಷ್ಕಿ ಜಮೀನಿನಲ್ಲಿ ಅನುಸರಿಸ ಬಹುದಾದ ತಂತ್ರಜ್ಞಾನಗಳು,ಸಿರಿಧಾನ್ಯಗಳ ಉತ್ಪನ್ನ ಮತ್ತು ಮಹತ್ವ ,ಬೇಸಾಯ ಮಾಡುವ ಬೆಳೆಗೆ ನೀರಿನ ಮತ್ತು ಪೋಷಕಾಂಶಗಳ ಅವಶ್ಯಕತೆ,ಕಳೆಗಳ ನಿರ್ವಹಣೆ ನಿಖರ ಬೇಸಾಯದಲ್ಲಿ ಬೆಳೆ ಉತ್ಪಾದನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯುವ ಕುರಿತು ಮಾಹಿತಿ ನೀಡುವ ತಜ್ಞರು ಮೇಳದಲ್ಲಿರುತ್ತಾರೆ.ರೈತರು ಸಂಬಂಧಿಸಿದ ತಜ್ಞರಿಂದ ಮಾಹಿತಿ ಪಡೆಯಬಹುದು.

Also read  Coffee market: Asia leads as Indonesia,India and Vietnam showed fastest growth

ಬೀಜ,ಗೊಬ್ಬರ,ನರ್ಸರಿಯ ಜತೆಗೆ,ಜೆಸಿಬಿ,ಟ್ರ್ಯಾಕ್ಟರ್‌ನಂತಹ ಕೃಷಿ ಪೂರಕ ಬೃಹತ್ ಯಂತ್ರಗಳ ಪ್ರದರ್ಶನ,ಮಾರಾಟವಿರುತ್ತದೆ.

ಹೊಸ ತಳಿಗಳ ಬಿಡುಗಡೆ:
ಗಂಗಾವತಿ ಸೋನಾ, ಅಲಸಂದೆ ಪಿಜಿಸಿಪಿ-6, ಉದ್ದು ಎಲ್‌ಬಿಜಿ 791,ಸೂರ್ಯಕಾಂತಿ ಕೆಬಿಎಸ್‌ಎಚ್‌-78,ಕಬ್ಬು ಸಿಒವಿಸಿ-16061,ಕಬ್ಬು ಸಿಒವಿಸಿ-16062 ಮತ್ತು ಹಲಸು ಲಾಲ್‌ಬಾಗ್‌ ಮಧುರ ಎಂಬ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಲಪತಿಗಳು ಮಾಹಿತಿ ನೀಡಿದರು.

ಸಾಮಾನ್ಯವಾಗಿ ನವೆಂಬರ್‌ ಮಧ್ಯೆ ಕೃಷಿ ಮೇಳ ಏರ್ಪಡಿಸಲಾಗುತ್ತದೆ.ಆದರೆ,ಈ ಬಾರಿ ಎರಡು ವಾರ ಮುಂಚಿತವಾಗಿ ಹಮ್ಮಿಕೊಳ್ಳಲಾಗಿದೆ.ವಾರಾಂತ್ಯದಲ್ಲಿ ಮಳೆ ಮುನ್ಸೂಚನೆ ಮತ್ತೂಂದೆಡೆ ದೀಪಾವಳಿ ಇದೆ. ಈ ನಡುವೆ ಮೇಳ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ರೈತರ ಭಾಗವಹಿಸುವಿಕೆ ಕಡಿಮೆ ಎನ್ನಲಾಗಿದೆ.

Also read  Black pepper prices stays steady on limited supply

ಪ್ರಾತ್ಯಕ್ಷಿಕೆಗಳು
* ಹನಿ ನೀರಾವರಿಯಲ್ಲಿ ಮುಸುಕಿನ ಜೋಳ,ತೊಗರಿ,ಗೋರಿಕಾಯಿ ಮತ್ತು ದಪ್ಪ ಮೆಣಸಿನಕಾಯಿ ಕೃಷಿ ಕುರಿತು ಪ್ರಾತ್ಯಕ್ಷಿಕೆಯ ತಾಕು.
* ಪ್ಲಾಸ್ಟಿಕ್ ಹೊದಿಕೆ ಮೂಲಕ ತಿಂಗಳ ಹುರುಳಿ,ಬದನೆ ಮತ್ತು ಕುಂಬಳಕಾಯಿ ಕೃಷಿಯ ವಿಧಾನ ವಿವರಿಸುವ ಪ್ರಾತ್ಯಕ್ಷಿಕೆ.
* ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ಹೊದಿಕೆ ಮೂಲಕ ಸೌತೆಕಾಯಿ,ಟೊಮೆಟೊ,ಬದನೆ,ಬೆಂಡೆ,ಮೆಣಸಿನಕಾಯಿ,ಕರಬೂಜ ಮತ್ತು ಹಾಗಲಕಾಯಿ,ಮುಸುಕಿನ ಜೋಳ,ಗ್ಲ್ಯಾಡಿಯೋಲಸ್ ಮತ್ತು ಚೆಂಡು ಹೂವು ಕೃಷಿ.
* ಹಸಿರು ಮನೆಯಲ್ಲಿ ಸಂರಕ್ಷಿತ ಬೇಸಾಯ.ಈ ವಿಧಾನದಲ್ಲಿ ಹಸಿರು ಮನೆಯಲ್ಲಿ ದೊಡ್ಡ ಮೆಣಸಿನಕಾಯಿ,ಸೌತೆಕಾಯಿ,ತಿಂಗಳ ಹುರುಳಿ ಮತ್ತು ಟೊಮೆಟೊ ಕೃಷಿ.
* ವಿವಿಧ ಆಕಾರಗಳಲ್ಲಿ ಪಡವಲಕಾಯಿ,ಸೋರೆಕಾಯಿ ಮತ್ತು ಹೀರೆಕಾಯಿ ಬೆಳೆಯುವುದು ಹೇಗೆ?
* ಸಂರಕ್ಷಿತ ಬೇಸಾಯ ವಿಭಾಗದಲ್ಲಿ ಹನಿ ನೀರಾವರಿ ಮೂಲಕವೇ ರಸಾವರಿ ಪೂರೈಸಿ, ಭತ್ತ ಬೆಳೆಯುವ ಪ್ರಾತ್ಯಕ್ಷಿಕೆ.

Also read  Rain and Floods caused Rs 800 crore loss to coffee planters