Coffee

ಕಾಫಿಬೆಳೆಗಾರರಲ್ಲಿ ಆತಂಕ ಮೂಡಿಸಿರುವ ಅಸ್ಸಾಂ ಕಾರ್ಮಿಕರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕಾಫಿ ತೋಟದ ಮಾಲೀಕರು ಆತಂಕಗೊಂಡಿದ್ದಾರೆ. ಮಾಲೀಕರು ಮಾತ್ರವಲ್ಲ ಗ್ರಾಮಸ್ಥರು ಜೀವ ಭಯದಿಂದ ಕಂಗಾಲಾಗಿದ್ದಾರೆ. ಕೆಲಸ ಹುಡುಕಿ ದೂರದ ಅಸ್ಸಾಂ ರಾಜ್ಯದಿಂದ ಬಂದಿರುವ ಸಾವಿರಾರು ಕಾರ್ಮಿಕರು ಮಲೆನಾಡಿನ ಗ್ರಾಮದಲ್ಲಿ  ನಡೆಸುತ್ತಿರುವ ದೌರ್ಜನ್ಯ ,ಹಲ್ಲೆ ,ಗಲಾಟೆಗೆ ಚಿಕ್ಕಮಗಳೂರು ಪೋಲಿಸರನ್ನೂ ನಿದ್ದೆಗೆಡಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ತಡರಾತ್ರಿ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದ ಖಾಸಗಿ ಎಸ್ಟೇಟ್ ವೊಂದರಲ್ಲಿ ಅಸ್ಸಾಂ ಕಾರ್ಮಿಕರು ನಡೆಸಿರುವ ಗಲಾಟೆಗೆ ಮಲಗಾರು ಗ್ರಾಮದ ಹತ್ತಕ್ಕೂ ಅಧಿಕ ಜನರು ಆಸ್ಪತ್ರೆ ಸೇರಿದ್ದಾರೆ.

ಕೆಲಸದ ವಿಚಾರಕ್ಕೆ ಎಸ್ಟೇಟ್ ರೈಟರ್ ಜೊತೆಗೆ ನಡೆಯುತ್ತಿದ್ದ ಗಲಾಟೆಯನ್ನ ಬಿಡಿಸಲು ಬಂದ ಮಲಗಾರು ಗ್ರಾಮದ ಹತ್ತಕ್ಕೂ ಹೆಚ್ಚು ಗ್ರಾಮಸ್ಥರನ್ನ ಅಸ್ಸಾಂ ಮೂಲದ ನೂರಾರು ಕಾರ್ಮಿಕರು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ನೂರಾರು ಕಾರ್ಮಿಕರು ಕೈಗೆ ಸಿಕ್ಕ ಕಲ್ಲು ದೊಣ್ಣೆಯಿಂದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿರುವ ಗ್ರಾಮಸ್ಥರು ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಂದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಲ್ವರು ಅಸ್ಸಾಂ ಕಾರ್ಮಿಕರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯ ಜಾನಕಿರಾಮ್ ಒತ್ತಾಯಿಸಿದ್ದಾರೆ. 

ನಿನ್ನೆ ರಾತ್ರಿ ಖಾಸಗಿ ಎಸ್ಟೇಟ್ ವೊಂದರಲ್ಲಿ ನೂರಾರು ಅಸ್ಸಾಂ ಕಾರ್ಮಿಕರು ನಡೆಸಿದ ಗಲಾಟೆಯಿಂದ ಇಡೀ ಚಿಕ್ಕಮಗಳೂರು ಬೆಚ್ಚಿ ಬಿದ್ದಿದ್ದು ಆತಂಕ ಮನೆ ಮಾಡಿದೆ. ಕೆಲಸಕ್ಕಾಗಿ ದೂರದ  ಅಸ್ಸಾಂ ರಾಜ್ಯದಿಂದ ಚಿಕ್ಕಮಗಳೂರು ಜಿಲ್ಲೆಗೆ  ಬಂದಿರುವ 50 ಸಾವಿರಾರಕ್ಕೂ ಅಧಿಕ ಕಾರ್ಮಿಕರು ಒಂದಲ್ಲವೊಂದು ವಿಚಾರಕ್ಕೆ ದಿನನಿತ್ಯ ಸುದ್ದಿಯಾಗುತ್ತಲೆ ಇರ್ತಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಾವಿರಾರು ಕಾರ್ಮಿಕರ ಮೇಲೆ ಗಲಾಟೆ, ಹಲ್ಲೆ, ಕೊಲೆ ಪ್ರಕರಣ ದಾಖಲಾಗಿ ಜೈಲು ಸೇರಿದ್ದಾರೆ. 

ಪಕ್ಕದ ಬಾಂಗ್ಲಾದೇಶದಿಂದ ಅಕ್ರಮವಾಗಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಭಾರತಕ್ಕೆ  ಬಂದಿರುವ ಗಂಭೀರ ಆರೋಪಗಳು ಈ ಕಾರ್ಮಿಕರ ಮೇಲಿದ್ದು. ಜಿಲ್ಲೆಯಲ್ಲಿರುವ ಅಸ್ಸಾಂ ಕಾರ್ಮಿಕರನ್ನ ಗಡಿಪಾರು ಮಾಡುವಂತೆ ಚಿಕ್ಕಮಗಳೂರು  ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಭಜರಂಗದಳ ಆಗ್ರಹಮಾಡಿದೆ. ಒಂದೊತ್ತಿನ ಊಟ, ಬದುಕಿಗಾಗಿ ದೂರದ ಅಸ್ಸಾಂನಿಂದ ಕೆಲಸಕ್ಕೆ ಬಂದಿರುವ ಕಾರ್ಮಿಕರು ಜಿಲ್ಲೆಯಲ್ಲಿ ನಡೆಸುತ್ತಿರುವ ದೌರ್ಜನ್ಯಕ್ಕೆ  ಜನತೆ ಆಕ್ರೋಶಗೊಂಡಿದ್ದಾರೆ. ಚಿಕ್ಕಮಗಳೂರಿನ ಪೊಲೀಸ್ ಇಲಾಖೆ ಕೂಡ ಕಾರ್ಮಿಕರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಕಡಿಮೆ ಸಂಬಳದ ಆಸೆಗೆ ಅಸ್ಸಾಂ ಕಾರ್ಮಿಕರನ್ನ ಕೆಲಸಕ್ಕೆ ಸೇರಿಸಿಕೊಳ್ಳುವ ಕಾಫಿ ಎಸ್ಟೇಟ್ ಮಾಲೀಕರು ಎಚ್ಚರಿಕೆವಹಿಸಬೇಕಾಗಿದೆ.

Also read  Yemen Coffee tops list of 'Top 30 Coffees of 2017'