ಬಸವನಹುಳ ಸಂಹಾರಕ್ಕೆ ಲಗ್ಗೆ ಇಟ್ಟ ದೈತ್ಯ ಆಫ್ರಿಕನ್‌ ಕೊಕ್ಕರೆ

ಆಫ್ರಿಕನ್‌ ಬಸವನಹುಳ ಉಪಟಳದಿಂದಾಗಿ ಬಸವಳಿದು ಹೋಗಿದ್ದ ದಕ್ಷಿಣ ಕನ್ನಡ ರೈತಾಪಿವರ್ಗದ ಬಾಳಿಗೆ ಆಶಾಕಿರಣವಾಗಿ ಮೂಡಿ ಬಂದಿದ್ದ ಆಫ್ರಿಕನ್‌ ಕೊಕ್ಕರೆಗಳು ಇದೀಗ ಮತ್ತೆ ಹುಳಗಳ ಸಂಹಾರಕ್ಕೆ ಲಗ್ಗೆ ಇಟ್ಟಿವೆ. 

ಐದಾರು ವರ್ಷಗಳಿಂದ ಆಫ್ರಿಕನ್‌ ಹುಳ ಕೃಷಿ ತೋಟಗಳಿಗೆ ನುಗ್ಗಿ ಮಹಾಮಾರಿಯಾಗಿ ಕಾಡುತ್ತಿತ್ತು. ಕೀಟನಾಶಕಗಳನ್ನು ಬಳಸಿ ಹುಳುಗಳನ್ನು ನಾಶ ಮಾಡುತ್ತಿದ್ದರಾದರೂ, ಸಂಪೂರ್ಣ ನಾಶ ಸಾಧ್ಯವಾಗಿರಲಿಲ್ಲ. ಪ್ರಕೃತಿಯಲ್ಲಿ ಕಂಡು ಬಂದ ವಿನಾಶಕಾರಿ ಬಸವನ ಹುಳುವಿಗೆ ಪ್ರಕೃತಿಯಲ್ಲೇ ಉಪಸಂಹಾರದ ವ್ಯವಸ್ಥೆ ಇದೆ ಎಂದು ಹೇಳುವ ಹಾಗೆ ಕಳೆದ ವರ್ಷ ಬಸವನಹುಳು ಪೀಡಿತ ಕೃಷಿ ತೋಟದ ರೈತರ ತೋಟಗಳಿಗೆ ಆಫ್ರಿಕನ್‌ ಕೊಕ್ಕರೆಗಳು ಲಗ್ಗೆಯಿಟ್ಟು ಹುಳ ಸಂಹಾರ ಮಾಡಿದ್ದವು.ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.   

Also read  ಕಾಫೀ ತೋಟದಲ್ಲಿನ ಶಂಖುಹುಳುಗಳ ನಿಯಂತ್ರಣ ಹೇಗೆ ?

ಈ ವರ್ಷವು ಆಫ್ರಿಕನ್‌ ಕೊಕ್ಕರೆಗಳು ಆಗಮಿಸಿ ಬಸವನಹುಳಗಳನ್ನು ಎಲ್ಲೇ ಮೂಲೆಯಲ್ಲಿ ಅಡಗಿದ್ದರೂ ಹುಡುಕಿ ತಿನ್ನುತ್ತಿವೆ.. ಎಲ್ಲಿಂದಲೋ ಬಂದು ಆಲಂಕಾರು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಈ ದೈತ್ಯ ಕೊಕ್ಕರೆಗಳು ಇದೀಗ ಶೇ.70ಷ್ಟು ಬಸವನ ಹುಳಗಳನ್ನು ಸಂಹಾರ ಮಾಡಿ ಬಸವನಹುಳದ ಸಂತಾನ ನಶಿಸುವಂತೆ ಮಾಡುತ್ತಿವೆ.ಆರಂಭದಲ್ಲಿ ಕುಮಾರಧಾರಾ ನದಿ ಪಾತ್ರದ ಅಡಕೆ, ತೆಂಗು ತೋಟಗಳಲ್ಲಿ ತನ್ನ ಸಂತಾನ ಅಭಿವೃದ್ಧಿ ಮಾಡಿಕೊಂಡು ಕೃಷಿ ತೋಟಗಳಿಗೆ ಕಂಟಕಪ್ರಾವಾಗಿ ಬಿಟ್ಟು ಬಿಡದೆ ಕಾಡುತ್ತಿದ್ದ ಬಸವನ ಹುಳವನ್ನು ನಾಶ ಮಾಡಲು ಈ ದೈತ್ಯ ಕೊಕ್ಕರೆಗಳೇ ರಾಮ ಬಾಣ ಎನ್ನುವಂತಾಗಿದೆ. ಇದೀಗ ಆಲಂಕಾರು ಪರಿಸರಕ್ಕೆ ವಿಶೇಷ ಅತಿಥಿಯ ಆಗಮನದಿಂದ ಸಂತುಷ್ಟರಾಗಿರುವ ರೈತರು ಈ ಕೊಕ್ಕರೆಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡದೆ ಸಲಹುತ್ತಿದ್ದಾರೆ. ಅಲ್ಲದೆ ಪಟಾಕಿ ಶಬ್ದಗಳಿಗೆ ಓಡಿ ಹೋಗಬಹುದೆಂಬ ಭೀತಿಯಿಂದ ಈ ಭಾಗದಲ್ಲಿ ಇದೀಗ ಪಟಾಕಿ ಸಿಡಿಸುವುದನ್ನೇ ನಿಲ್ಲಿಸಿ ಕೊಕ್ಕರೆಗಳಿಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿದ್ದಾರೆ. ಕೊಕ್ಕರೆಗಳು ಬೆಳಗ್ಗೆ ಹಾಗೂ ಸಂಜೆ ಅಡಕೆ ತೋಟಕ್ಕೆ ಬಂದು ನಮಗೆ ಬಾಧೆ ನೀಡುತ್ತಿರುವ ಆಫ್ರಿಕನ್‌ ಬಸವನ ಹುಳುಗಳನ್ನು ತಿಂದು ನಾಶಪಡಿಸುತ್ತಿವೆ.      

ಕೀಟ ನಾಶಕಗಳಿಗಿಂತಲೂ ಈ ಕೊಕ್ಕರೆಗಳು ನೂರಕ್ಕೆ ನೂರರಷ್ಟು ಪರಿಣಾಮಕಾರಿಯಾಗಿದೆ. ದೈತ್ಯ ಕೊಕ್ಕರೆಗಳು ಇಲ್ಲಿ ತಮ್ಮ ಜೀವನವನ್ನು ಭದ್ರಪಡಿಸಿಕೊಳ್ಳುವುದರೊಂದಿಗೆ ಸಂತಾನ ಅಭಿವೃದ್ಧಿ ಮಾಡಿಕೊಂಡು ಕೃಷಿಕರಿಗೆ ವರದಾನವಾಗಿ ಪರಿಣಮಿಸಿದೆ. ಕೊಕ್ಕರೆಗಳ ಆಗಮನದಿಂದ ಬಸವನ ಹುಳದ ನಾಶ ಸಮರೋಪಾದಿಯಲ್ಲಿ ಸಾಗುತ್ತಿದೆ. ಒಂದನ್ನು ತಿಂದು ಇನ್ನೊಂದು ಬದುಕುವ ಪ್ರಕೃತಿಯ ಆಹಾರ ಸರಪಣಿ ವ್ಯವಸ್ಥೆ ರೈತರಿಗೆ ವರದಾನವಾಗಿದೆ.    

Also read  Why has the coffee price fallen so low?

ಈಗಾಗಲೇ 1000 ಕ್ಕೂ ಅಧಿಕ ರೈತ ಕುಟುಂಬಗಳ ಕೃಷಿ ತೋಟಗಳನ್ನು ಆಕ್ರಮಿಸಿಕೊಂಡಿದೆ. ಇವುಗಳು ಯಾವುದೇ ಗಿಡವನ್ನು ಆಕ್ರಮಿಸಿದರೆ ಅದರಲ್ಲಿನ ಎಲ್ಲ ಎಲೆಗಳನ್ನು ತಿಂದು ಗಿಡಗಳನ್ನು ನಾಶಮಾಡದೇ ಇಳಿಯುವುದಿಲ್ಲ. ಭತ್ತ, ಅಡಕೆ, ತೆಂಗು ಹುಳಗಳ ಪ್ರಮುಖ ಆಹಾರವಾಗಿದೆ. ಹುಳ ಗದ್ದೆಗೆ ಇಳಿದು ಎಲ್ಲ ಪೈರುಗಳನ್ನು ನಾಶಮಾಡುತ್ತಿದೆ. ಅಲ್ಲದೆ ತೆಂಗಿನ ಮರದ ಬೇರುಗಳನ್ನು ತಿಂದು ಮರವೇರುವ ಈ ಹುಳು ತೆಂಗಿನ ಹಿಂಗಾರ, ಅಡಕೆ ಹಿಂಗಾರ, ಗರಿಗಳನ್ನು ತಿಂದು ಮರವನ್ನೇ ನಾಶಮಾಡುವಷ್ಟರ ಮಟ್ಟಿಗೆ ಮುಂದುವರಿಯುತ್ತದೆ. ಬಾಳೆ ಗಿಡವನ್ನೂ ಸಂಪೂರ್ಣವಾಗಿ ಆಪೋಷನ ಮಾಡುವ ಈ ಹುಳು ಬಾಳೆಗಿಡ ನೆಲಕ್ಕುರಳಿಸದೆ ಬಿಡುವುದಿಲ್ಲ. ತರಕಾರಿ, ಬಸಳೆ,ಸುವರ್ಣಗೆಡ್ಡೆ, ಕೆಸುಗಳನ್ನು ಕೂಡ ನಾಶ ಮಾಡುತ್ತಿವೆ. ಹುಳು ಗದ್ದೆಯಲ್ಲಿ ಪೈರು ತಿಂದು ಮುಗಿದ ಬಳಿಕ ಮಣ್ಣನ್ನು ತಿನ್ನಲು ಆರಂಭಿಸುತ್ತವೆ.  

ಇಂತಹ ಮಾರಕ ಹುಳುವನ್ನು ನಾಶ ಮಾಡಬೇಕೆಂದು ರೈತರು ಅದೆಷ್ಟೋ ಪ್ರಯತ್ನ ಪಟ್ಟು ಸೋತು ಸುಣ್ಣವಾಗಿದ್ದರು. ಇಂತಹ ಸಂದರ್ಭದಲ್ಲಿ ದೂರದ ಭೂಪಾಲ್‌ನ ಸಂಸ್ಥೆಯೊಂದರಿಂದ ಕೀಟ ನಾಶಕ ತರಿಸಕೊಂಡು ಹುಳಗಳ ನಾಶಕ್ಕೆ ಪ್ರಯತ್ನಿಸಿದ್ದರು. ಇದರಲ್ಲಿ ಸಂಪೂರ್ಣ ಫಲ ಸಿಕ್ಕದೆ ಕಂಗಾಲಾಗಿದ್ದಾಗ ದೈತ್ಯ ಕೊಕ್ಕರೆಗಳು ರೈತರ ನೆರವಿಗೆ ಬಂದು ರೈತಮಿತ್ರರಾಗಿದ್ದವು.   

ಆಲಂಕಾರು ಪರಿಸರದಲ್ಲಿ ಕಳೆದ ಎರಡು ವರ್ಷಗಳಿಂದ ಅಲ್ಲಲ್ಲಿ ಕಾಣಸಿಗುವ ಈ ದೈತ್ಯ ಗಾತ್ರದ ಕೊಕ್ಕರೆ (ಇದನ್ನು ಜೈಂಟ್‌ ಕ್ರೇನ್‌ ಎಂದು ಕರೆಯಲಾಗುತ್ತದೆ. ಇವುಗಳು ಹೊರ ದೇಶದಿಂದ ಇಲ್ಲಿಗೆ ವಲಸೆ ಬಂದಿದ್ದರೂ ನಿರ್ದಿಷ್ಟವಾಗಿ ಇದೇ ದೇಶದ ಹಕ್ಕಿ ಎಂದು ಗುರುತಿಸಲಾಗಿಲ್ಲ, ಆದರೂ ಇವುಗಳನ್ನು ಆಫ್ರಿಕನ್‌ ಕೊಕ್ಕರೆ ಎಂದು ಕರೆಯಲಾಗುತ್ತಿದೆ.) ಅಲ್ಪ ಪ್ರಮಾಣದಲ್ಲಿ ಸುಮಾರು ಎರಡು ಮೂರು ಜೋಡಿ ಮಾತ್ರ ಇದ್ದು, ಇದೀಗ 30 ರಿಂದ 40 ಸಂಖ್ಯೆಯಲ್ಲಿರುವ ಹಿಂಡು ಕಾಣ ಸಿಗುತ್ತವೆ.   

Also read  Black pepper prices remains steady

ಸುಮಾರು ಎರಡು ಫೀಟ್‌ ಎತ್ತರದ ನಾಲ್ಕು ಫೀಟ್‌ ಅಗಲ ರೆಕ್ಕೆ ಹೊಂದಿರುವ ಬೂದು, ಕಪ್ಪುಮಿಶ್ರಿತ ಬಣ್ಣದಿಂದ ಕೂಡಿದ ಈ ಪಕ್ಷಿ ನೋಡಲು ಆಕರ್ಷಣೀಯವಾಗಿದೆ. ಆರಂಭದ ದಿನಗಳಲ್ಲಿ ಭತ್ತದ ಗದ್ದೆಗಳಲ್ಲಿ ತನ್ನ ಆಹಾರ ಹುಡುಕುತ್ತಾ ಹುಳು, ಕೀಟಗಳನ್ನು ತಿನ್ನುತ್ತಿದ್ದವು, ಗದ್ದೆಗಳಲ್ಲಿ ಇರುವ ಬಸವನ (ನರ್ತೆ) ಹುಳುವನ್ನು ತಿನ್ನುತ್ತಿದ್ದವು.  ಊರಿನ ಜನರಲ್ಲಿ ಸಹಜವಾಗಿಯೇ ಈ ಪಕ್ಷಿಗಳ ಬಗ್ಗೆ ಕುತೂಹಲ ಇತ್ತು. ದೂರದ ಆಫ್ರಿಕಾದಿಂದ ಬಂದ ಕೊಕ್ಕರೆಗಳು ಎಂದು ಜನ ಅವುಗಳನ್ನು ನೋಡಲು ಹೋಗುತ್ತಿದ್ದರು. ಜನಗಳನ್ನು ನೋಡಿದ ತಕ್ಷ ಣ ಹೆದರುತ್ತಿದ್ದ ಈ ಕೊಕ್ಕರೆಗಳು ಮಾರು ದೂರ ಹಾರಿ ಹೋಗುತ್ತಿದ್ದವು. ಇವುಗಳಿಗೆ ಮನುಷ್ಯರಾರೂ ಕಿರುಕುಳ ನೀಡದೆ ಅವುಗಳನ್ನು ಕೊಂದು ತಿನ್ನುವ ದುಸ್ಸಾಹಸಕ್ಕೆ ಹೋಗದೆ ಇರುವುದರಿಂದ ಕೊಕ್ಕರೆಗಳು ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಹಾರುತ್ತಾ ಜಿಗಿಯತ್ತಾ ತಮ್ಮ ಪಾಡಿಗೆ ತಾವು ಓಡಾಟ ಮಾಡುತ್ತಾ ಇವೆ.   

ಪರಿಸರದ ಅಡಕೆ ತೋಟಗಳಲ್ಲಿ ಬೆಳಗ್ಗೆ ಮತ್ತು ಸಂಜೆಯ ತಂಪಾದ ಸಮಯದಲ್ಲಿ ಹೇರಳವಾಗಿ ಕಾಣಸಿಗುವ ಆಫ್ರಿಕನ್‌ ಬಸವನ ಹುಳುಗಳನ್ನು ತಿನ್ನಲು ಈ ಕೊಕ್ಕರೆಗಳು ಮುಗಿಬಿದ್ದು ಹುಡುಕಿ ಹುಡುಕಿ ತಿನ್ನತೊಡಗುತ್ತವೆ. ಇದರಿಂದಾಗಿ ತೋಟಗಳಲ್ಲಿ ಆಫ್ರಿಕನ್‌ ಬಸವನ ಹುಳದ ಸಂಖ್ಯೆ ಬಹಳಷ್ಟು ಇಳಿಮುಖವಾಗಿದೆ.  ಈ ಬಸವನ ಹುಳು ಬಿಟ್ಟು ಈ ಕೊಕ್ಕರೆಗಳಿಗೆ ಬೇರೆ ಆಹಾರವೇ ಬೇಡವಾಗಿದೆ. ಇದೇ ಕಾರಣಕ್ಕೆ ಕೊಕ್ಕರೆಗಳು ತೋಟಕ್ಕೆ ಎಂಟ್ರಿಯಾದರೆ ತೋಟದ ಮಾಲೀಕರು ಅದನ್ನು ಓಡಿಸುವ ಗೋಜಿಗೆ ಹೋಗುವುದಿಲ್ಲ. ಮಾತ್ರವಲ್ಲ ಬಸವನ ಹುಳುಗಳ ನಾಶಕ್ಕೆ ಯಾವುದೇ ಕೀಟ ನಾಶಕವನ್ನು ಬಳಸುತ್ತಿಲ್ಲ. ಕೀಟ ನಾಶಕ ತಿಂದು ಕೊಕ್ಕರೆ ಸಂತಾನ ಕಡಿತವಾದರೆ ಬಸವನ ಹುಳ ಸಂತಾನ ವೃದ್ಧಿಯಾಗಬಹುದೆನ್ನುವ ಭಯದಿಂದ ಕೊಕ್ಕರೆಗಳನ್ನು ಪೋಷಣೆ ಮಾಡುವ ರೀತಿಯಲ್ಲಿ ಕೃಷಿಕರು ಕಾಣುತ್ತಿದ್ದಾರೆ. ಒಟ್ಟಿನಲ್ಲಿ ಬಸವನಹುಳು ನಾಶಕ್ಕೆ ದೈತ್ಯ ಕೊಕ್ಕರೆಗಳು ಮತ್ತೆ ಮತ್ತೆ ಲಗ್ಗೆ ಇಡುವುದು ರೈತರಲ್ಲಿ ಸಂತಸವನ್ನುಂಟು ಮಾಡುತ್ತಿದೆ.

Also read  Heavy Mumbai rains to continue for some time