Featured NewsKrushi

ಕಾಫಿ ಮಂಡಳಿ ಅಧ್ಯಕ್ಷರಾಗಿರುವ ಬೋಜೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಲಹೆ

‘ಭಾರೀ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು ಮತ್ತು ಹಾನುಬಾಳು ಹೋಬಳಿಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಕಾಫಿ ಬೆಳೆಗಾರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಬಿ.ಎ. ಜಗನ್ನಾಥ್‌ ಒತ್ತಾಯಿಸಿದರು.

‘ಮೂರು ವರ್ಷಗಳಿಂದ ಅನಾವೃಷ್ಟಿಯಿಂದ ಕಾಫಿ ಹಾಗೂ ಮೆಣಸು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಆದರೆ, ಈ ಬಾರಿ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಕೂಡಲೇ ಸರ್ಕಾರ ಬೆಳೆಗಾರರ ನೆರವಿಗೆ ನಿಲ್ಲಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಾಫಿ ಮಂಡಳಿಗೆ ಬೆಳೆಗಾರರೇ ಅಧ್ಯಕ್ಷರಾಗಬೇಕೆಂದು ಹೋರಾಟದ ನಡೆಸಿದ ಫಲವಾಗಿ ಬೋಜೇಗೌಡ ಅಧ್ಯಕ್ಷರಾದರು. ಆದರೆ, ಇದೀಗ ಅವರು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲಾಗದ ಅಸಹಾಯಕ ಪರಿಸ್ಥಿತಿ ತಲುಪಿದ್ದು, ಐಎಎಸ್ ಅಧಿಕಾರಿಗಳು ಮಂಡಳಿಯನ್ನು ನಿಯಂತ್ರಿಸುತ್ತಿದ್ದಾರೆ. ನೆಪಮಾತ್ರ ಅಧ್ಯಕ್ಷರಾಗಿರುವ ಬೋಜೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಕಾಫಿ ಮಂಡಳಿ ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಇದ್ದು, ಮುಂಬೈನಲ್ಲಿ ಹಾಗೂ ಕೊಚ್ಚಿಯಲ್ಲಿ ಇದರ ಕೇಂದ್ರ ಕಚೇರಿಗಳು ಇವೆ. ಐಎಎಸ್ ಅಧಿಕಾರಿಗಳ ಹಿಡಿತದಲ್ಲೇ ಕಚೇರಿಗಳು ನಡೆಯುತ್ತಿದೆ. ಮಲೆನಾಡು ಭಾಗದಲ್ಲಿ ಬೆಳೆಗಾರರು ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ನಂಬಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.

‘ಕಳಪೆ ಗುಣಮಟ್ಟದ ಮೆಣಸು ಅನಧಿಕೃತವಾಗಿ ವಿಯಾಟ್ನಾಂನಿಂದ ಭಾರತಕ್ಕೆ ಆಮದಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ 8 ತಿಂಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ವಾಣಿಜ್ಯ ಸಚಿವಾಲಯದ ಕನಿಷ್ಠ ಆಮದು ದರ ಪ್ರತಿ ಕೆ.ಜಿ.ಗೆ ₹ 500 ನಿಗದಿ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪಶ್ಚಿಮ ಘಟ್ಟಗಳ ಬಗ್ಗೆ ಕೆಲವರು ಇಲ್ಲ ಸಲ್ಲದ ವರದಿಗಳನ್ನು ಬಿತ್ತರ ಮಾಡುತ್ತಿದ್ದಾರೆ. ಹೋಮ್ ಸ್ಟೇ ಹಾಗೂ ಕೆರೆಗಳ ನಿರ್ಮಾಣ ಈ ಭಾಗದಲ್ಲಿ ಗುಡ್ಡ ಕುಸಿಯಲು ಕಾರಣ ಎಂದು ವರದಿಗಳು ಮಾಡಲಾಗಿದೆ. ಆದರೆ, ಈ ಭಾಗದ ನಿಜವಾದ ವಾಸ್ತವೇ ಬೇರೆ ಇದೆ. ಪರಿಸರವಾದಿಗಳು ನಗರಗಳಲ್ಲಿ ಕುಳಿತು ಪರಿಸರದ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಮಲೆನಾಡಿನ ಜನರಿಗೆ ಪಶ್ಚಿಮ ಘಟ್ಟಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ತಿಳಿದಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಎಕರೆ ಕಾಫಿ, ಮೆಣಸು ಹಾನಿಗೊಳಗಾಗಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಹೋರಾಟ ಸಿದ್ಧಪಡಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣ ಸಮಿತಿ ರಚನೆ ಮಾಡಲಾಗುವುದು’ ಎಂದರು.

Also read  Pepper remains firm on listless market

Leave a Reply