AgrinewsFeatured News

ಮಡಿಕೇರಿ : ಏಡಿ, ಕಣಿಲೆ,ಮರಕೆಸಗೆ ಭಾರೀ ಬೇಡಿಕೆ

ನಗರದಲ್ಲಿ ಮಂಜಿನ ವಾತಾವರಣವಿದ್ದು ಜನರು ಬೆಚ್ಚಗಿರಲು ಏಡಿ, ಕಣಿಲೆ ಖರೀದಿಗೆ ಮುಂದಾಗಿದ್ದಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಏಡಿಗಳು, ಬಿದಿರಿನ ಕಣಿಲೆ, ಮರಕೆಸ ನಗರದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ; ಇವುಗಳಿಗೆ ಈಗ ಭಾರೀ ಬೇಡಿಕೆಯೂ ಬಂದಿದೆ.

ಜನರು ಮಳೆಗಾಲದಲ್ಲಿ ವಿವಿಧ ಬಗೆಯ ಖಾದ್ಯಗಳ ಮೊರೆ ಹೋಗುವುದು ಸಾಮಾನ್ಯ. ಅದರಲ್ಲೂ ಮೈಕೊರೆಯುವ ಚಳಿಯಿಂದ ಬೆಚ್ಚಗಿರಿಸುವಂತಹ ಆಹಾರ ಪದಾರ್ಥಗಳನ್ನು ಜನರು ಬಯಸುತ್ತಾರೆ. ಈಗ ಅಂಥ ಆಹಾರ ಪದಾರ್ಥಗಳಾದ ಏಡಿ, ಕಣಿಲೆಗಳು ಇಲ್ಲಿನ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಮೈಸೂರಿನ ಎಚ್.ಡಿ. ಕೋಟೆ, ಭೀಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಿಂದ ಪ್ರತಿದಿನ ಸುಮಾರು 30ರಿಂದ 40 ಕೆ.ಜಿ. ಏಡಿ ತಂದು ಇಲ್ಲಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿ ಮಾಲೆಗೆ (12 ಏಡಿ) ₹ 300 ದರವಿದೆ. ಕೆ.ಜಿ.ಗೆ ₹ 250.

‘ಹಿಂದೆ ಮಳೆಗಾಲದಲ್ಲಿ ಭತ್ತದ ಗದ್ದೆ, ಹಳ್ಳಕೊಳ್ಳದಲ್ಲಿ ಏಡಿಗಳು ಸಿಗುತ್ತಿದ್ದವು. ಖಾದ್ಯಪ್ರಿಯರೂ ಮುಗಿಬಿದ್ದು ಖರೀಸುತ್ತಿದ್ದರು. ಈಗ ಬೇಡಿಕೆ ಹೆಚ್ಚಿದ್ದರೂ ಏಡಿ ಮಾರಾಟಗಾರರ ಸಂಖ್ಯೆ ಕಡಿಮೆಯಿದೆ. ಏಡಿ ಲಭ್ಯತೆಯೂ ಹಿಂದಿನಷ್ಟು ಇಲ್ಲ’ ಎಂದು ನಗರದ ಖಾಸಗಿ ಬಸ್‌ ನಿಲ್ದಾಣದ ಸಮೀಪ ಏಡಿ ಮಾರಾಟ ಮಾಡುತ್ತಿರುವ ಕುಮಾರ್‌ ಹೇಳುತ್ತಾರೆ.

ಕಣಿಲೆಗೂ ಬಂತು ಬೇಡಿಕೆ: ಉಷ್ಣಾಂಶ ಹಾಗೂ ಔಷಧೀಯ ಗುಣ ಹೊಂದಿರುವ ಆಹಾರಗಳಿಗೆ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆಯಿದೆ. ಜಿಲ್ಲೆಗೆ ವಾರಾಂತ್ಯ ಬರುವ ಪ್ರವಾಸಿಗರೂ ಕಣಿಲೆ ಕೊಂಡೊಯ್ಯುತ್ತಾರೆ. ಅರಣ್ಯ ಪ್ರದೇಶದಲ್ಲಿ ಬೆಳೆಯುವ ಬಿದಿರಿನ ಕಣಿಲೆಯನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ. ಏಡಿಯಂತೆಯೇ ಇದು ಕೂಡ ಉಷ್ಣಾಂಶ ಹೊಂದಿರುವ ಖಾದ್ಯವಾಗಿದ್ದು, ವ್ಯಾಪಾರಿಗಳು ಇಂದು ಸುಮಾರು ಅರ್ಧ ಕಿ.ಲೋ. ತೂಕ ಹೊಂದಿರುವ ಕಣಿಲೆಯ ಒಂದು ಪ್ಯಾಕೆಟ್‌ಗೆ ₹ 40ರಿಂದ ₹ 50 ಮಾರಾಟ ಮಾಡುತ್ತಿದ್ದಾರೆ.

ಮರಕೆಸ: ಮರದ ಮೇಲೆ ಬಿಡುವ ‘ಮರಕೆಸ’ ಎಂಬ ಸೊಪ್ಪು ಕೂಡ ಔಷಧ ರೂಪದೊಂದಿಗೆ ಉಷ್ಣಾಂಶ ಹೊಂದಿರುವ ಖಾದ್ಯವಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಮರಕೆಸವನ್ನು ಬಳಸುತ್ತಾರೆ. ಮರಕೆಸದಿಂದ ಪತ್ರೊಡೆ, ಬಜ್ಜಿಗಳನ್ನು ತಯಾರಿಸಿ ಸವಿಯುತ್ತಾರೆ. ಇನ್ನು ಜಿಲ್ಲೆಯಲ್ಲಿ ಹೆಚ್ಚು ಜನ ಮಾಂಸಾಹಾರಿಗಳಾಗಿದ್ದಾರೆ. ಕೋಳಿಸಾರು, ಪಂದಿಕರಿಗಳ ವಿವಿಧ ಖಾದ್ಯಗಳನ್ನು ಮಾಡಿ ಸವಿಯುವುದು ಸಾಮಾನ್ಯವಾಗಿದೆ.

‘ಮನೆಗಳಲ್ಲಿ ಮಾತ್ರವಲ್ಲ. ಕೊಡಗಿನ ಹೋಂ ಸ್ಟೇ, ರೆಸಾರ್ಟ್‌ಗಳಲ್ಲೂ ಈಗ ಮಳೆಗಾಲದ ಖಾದ್ಯಗಳನ್ನು ತಯಾರು ಮಾಡಲಾಗುತ್ತಿದೆ. ಏಡಿ ಸಾರು, ಏಡಿ ಡ್ರೈ, ಕಣಿಲೆ ಉಪ್ಪಿನಕಾಯಿ, ಕಣಿಲೆ ಪಲ್ಯಕ್ಕೂ ಬೇಡಿಕೆಯಿದೆ. ಹೀಗಾಗಿ, ಮಳೆಗಾಲದ ಖಾದ್ಯಗಳನ್ನೇ ನಾವು ಹೆಚ್ಚಾಗಿ ತಯಾರಿಸುತ್ತಿದ್ದೇವೆ. ಹೋಂ ಸ್ಟೇಗೆ ಬರುವ ಅತಿಥಿಗಳೂ ಸಂತೃಪ್ತರಾಗುತ್ತಿದ್ದಾರೆ’ ಎಂದು ಹೇಳುತ್ತಾರೆ ಹೋಂಸ್ಟೇ ಮಾಲೀಕ ಸುಯೋಗ್‌ .

ಮತ್ತಷ್ಟು ಓದು:ಪ್ರಜಾವಾಣಿ

Also read  ಕೊಡಗಿನಲ್ಲಿ ಮುಂದುವರಿದ ಮಳೆ: ತ್ರಿವೇಣಿ ಸಂಗಮ ನೀರಿನ ಮಟ್ಟ ಏರಿಕೆ

Leave a Reply