Krushi

ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆ ಕಾರಣ:ಪರಿಸರ ಚಿಂತಕರ ದೂರು

ಪಶ್ಚಿಮಘಟ್ಟವನ್ನು ಅಕ್ಷರಶಃ ನಡುಗಿಸಿರುವ ಜಲಪ್ರಳಯಕ್ಕೆ ಜನರ ಬದುಕು ಮೂರಾಬಟ್ಟೆಯಾಗಿದೆ. ಎರಡು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದ ಭೂ ಕುಸಿತ ಸಂಭವಿಸುತ್ತಲೇ ಇದೆ.
ಭೂಕುಸಿತಕ್ಕೆ ಎತ್ತಿನಹೊಳೆ ಕಾರಣವೇ ಎನ್ನುವ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.ಈ ಪ್ರಶ್ನೆಗೆ ಪುಷ್ಟಿ ನೀಡುವಂತೆ ಎತ್ತಿನಹೊಳೆ ಯೋಜನೆ ವ್ಯಾಪ್ತಿಯಲ್ಲಿರುವ ಕಡ್ರಳ್ಳಿ, ಹೊಸಹಳ್ಳಿ, ಮೊಗನಹಳ್ಳಿ, ಜೇಡಿಗದ್ದೆ, ಮೂಕನಮನೆ, ಹೊಂಗಡಹಳ್ಳ, ಎಡಕುಮರಿ, ಬಟ್ಟೆಕುಮರಿ, ಕರಡಿಗಾಲ, ಕುರ್ಕಮನೆ, ಬಾಜಿಮನೆ, ಕಾಡುಮನೆ, ನೂದರಹಳ್ಳಿ, ನಡನಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಫಿ, ಏಲಕ್ಕಿ, ಮೆಣಸಿನತೋಟ ಮತ್ತು ಭತ್ತದ ಗದ್ದೆಗಳು ಕುಸಿದಿವೆ.

ಎತ್ತಿನಹೊಳೆ ಯೋಜನೆ ಕಾರಣ -ಪರಿಸರಪರ ಸಂಘಟನೆಗಳು ಆರೋಪಿ
ಪಶ್ಚಿಮವಾಹಿನಿಯಾಗಿ ಹರಿದು ನೇತ್ರಾವತಿ ಮತ್ತು ಇತರ ನದಿಗಳ ಮೂಲಕ ಅರಬ್ಬಿ ಸಮುದ್ರ ಸೇರುವ ಜಲಧಾರೆಗಳನ್ನು ಪೂರ್ವಕ್ಕೆ ತಿರುಗಿಸಿ ಬಯಲುಸೀಮೆಗೆ ನೀರು ಕೊಡುವುದು ಎತ್ತಿನಹೊಳೆ ಯೋಜನೆಯ ಮುಖ್ಯ ಆಶಯ. ಯೋಜನೆ ಆರಂಭವಾದಗಿನಿಂದಲೂ ಸ್ಥಳೀಯರಲ್ಲೂ ಪರ, ವಿರೋಧದ ಚರ್ಚೆ ನಡೆಯುತ್ತಲೇ ಇತ್ತು. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಉಂಟಾಗಿರುವ ಅವಘಡಗಳಿಗೆ ಎತ್ತಿನಹೊಳೆ ಯೋಜನೆ ಕಾರಣವಾಯಿತೇ ಎನ್ನುವ ಪ್ರಶ್ನೆಯೂ ಈಗ ಸ್ಥಳೀಯರನ್ನು ಕಾಡಲು ಆರಂಭಿಸಿದೆ.

‘ಈ ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ವೈಜ್ಞಾನಿಕವಾದ ಅಧ್ಯಯನ ನಡೆಸದೆ ಅನುಷ್ಠಾನಗೊಳಿಸಲು ಹೊರಟಿದ್ದು ಇಂಥ ವಿಕೋಪಗಳಿಗೆ ಮೂಲ ಕಾರಣ’ ಎಂದು ಪರಿಸರಪರ ಸಂಘಟನೆಗಳು ಆರೋಪಿಸುತ್ತಿವೆ.

‘ಪಶ್ಚಿಮಘಟ್ಟದ ದಟ್ಟ ಕಾನನದ ನಡುವೆ ಬೃಹತ್‌ ಪೈಪ್‌ಗಳನ್ನು ಹೂಳಲು ಬೆಟ್ಟ, ಗುಡ್ಡಗಳನ್ನು ಯದ್ವತದ್ವಾ ಅಗೆಯಲಾಗಿದೆ. ಮಾರ್ಗದ ನಡುವೆ ಸಿಕ್ಕ ಬಂಡೆಗಳನ್ನು ಒಡೆದು ತೆಗೆಯಲು ಸ್ಫೋಟಕ ಬಳಸಲಾಗಿದೆ. ಇದರಿಂದ ಈ ಪ್ರದೇಶದ ಗಟ್ಟಿತನಕ್ಕೆ ಧಕ್ಕೆ ಉಂಟಾಗಿದೆ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

‘ಮತ್ತೊಂದೆಡೆ ಕಾಲುವೆ, ಚೆಕ್ ಡ್ಯಾಂ ನಿರ್ಮಾಣ, ವಾಹನಗಳ ಓಡಾಟಕ್ಕೆಂದು ಸಾವಿರಾರು ಮರಗಳನ್ನು ಬುಡಮೇಲು ಮಾಡಲಾಗಿದೆ. ಪಶ್ಚಿಮಘಟ್ಟ ಸಾವಿರಾರು ವರ್ಷಗಳಿಂದ ಅಪರೂಪದ ಸಸ್ಯಸಂಪತ್ತು, ವನ್ಯಸಂಕುಲಕ್ಕೆ ಆಶ್ರಯತಾಣವಾಗಿತ್ತು. ಗಟ್ಟಿಯಾದ ಬೆಟ್ಟ, ಗುಡ್ಡಗಳು, ಭಾರಿ ಗಾತ್ರದ ಮರಗಳು ಮಳೆ ನೀರಿನ ಹರಿವನ್ನು ನಿಯಂತ್ರಿಸುತ್ತಿದ್ದವು. ಈಗ ಅಲ್ಲಲ್ಲಿ ಭೂಮಿ ಸಡಿಲ ಆಗಿರುವುದು ಹಾಗೂ ಎಲ್ಲೆಂದರಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಭೂ ಕುಸಿತ ಉಂಟಾಗುತ್ತಿದೆ’ ಎಂಬುದು ಪರಿಸರ ಚಿಂತಕರ ದೂರು.

‘ಮೂವತ್ತು ವರ್ಷದ ಹಿಂದೆ ಈ ಭಾಗದಲ್ಲಿ 750 ಸೆಂ.ಮೀ. ಮಳೆಯಾಗುತ್ತಿತ್ತು. ಆಗ ಈ ಪ್ರಮಾಣದ ಹಾನಿಯಾಗುತ್ತಿರಲಿಲ್ಲ. ಗಣಿಗಾರಿಕೆ, ರಸ್ತೆ ವಿಸ್ತರಣೆ, ಕಟ್ಟಡಗಳ ನಿರ್ಮಾಣ, ಅರಣ್ಯನಾಶವೇ ಭಾರಿ ಭೂಕುಸಿತಕ್ಕೆ ಕಾರಣ. ಅದರಲ್ಲೂ ಎತ್ತಿನಹೊಳೆ ಯೋಜನೆ ಪ್ರದೇಶದಲ್ಲಿ ಹೆಚ್ಚು ಭೂಕುಸಿತವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪಶ್ಚಿಮಘಟ್ಟದಲ್ಲಿ ಕೈಗೊಂಡಿರುವ ಕಿರುಜಲ ವಿದ್ಯುತ್‌ ಯೋಜನೆ ಹಾಗೂ ರೈಲ್ವೆ ಮಾರ್ಗದಲ್ಲಿ ಸುರಂಗ ನಿರ್ಮಾಣಕ್ಕೆ ಸ್ಫೋಟಕ ಬಳಸಲಾಗಿದೆ. ಕಸ್ತೂರಿರಂಗನ್ ವರದಿಯು ಪಶ್ಚಿಮಘಟ್ಟದ ಶೇ 37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವಂತೆ ಶಿಫಾರಸು ಮಾಡಿದೆ. ಇದನ್ನು ಅನುಷ್ಠಾನ ಮಾಡಿದರೆ ಮಾತ್ರ ಪರಿಸರ ಉಳಿಯುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಇಂತಹ ಅವಘಡಗಳಿಗೆ ತಲೆ ಕೊಡುತ್ತಲೇ ಇರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಕೆಲವು ಕಡೆ ನೀರಿನ ಹರಿವಿನ ದಿಕ್ಕೇ ಬದಲಾಗಿದೆ. ಕಾಫಿ, ಏಲಕ್ಕಿ, ಕಾಳುಮೆಣಸು ತೋಟಗಳು, ಭತ್ತದ ಗದ್ದೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಗದ್ದೆ, ತೋಟಗಳಿಗೆ ಹೋಗುವ ರಸ್ತೆಗಳು ಬಂದ್‌ ಆಗಿವೆ. ಆಗಿರುವ ಹಾನಿ ಸರಿಪಡಿಸಿ ಮೂಲ ಸ್ಥಿತಿಗೆ ತರಬೇಕೆಂದರೆ ದಶಕಗಳೇ ಬೇಕಾಗಬಹುದು’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.

ಈ ಅನಾಹುತಕ್ಕೆ ಪ್ರಕೃತಿ ವಿಕೋಪದ ಜತೆಗೆ ಮಾನವ ನಿರ್ಮಿತ ಲೋಪಗಳು ಕಾರಣ ಎಂಬ ಮಾತು ಸ್ಥಳೀಯರಿಂದಲೇ ಕೇಳಿ ಬಂದಿದೆ.

Also read  ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆ ಕಾರಣ:ಪರಿಸರ ಚಿಂತಕರ ದೂರು
Also read  ಮಳೆ ಬಿಡುವು:ಕಾಫಿ,ಅಡಿಕೆ ತೋಟದಲ್ಲಿ ಪುನಃಶ್ಚೇತನ ಕೆಲಸ
Also read  ಕೊಡಗಿನ ಚೆಂಬು ಬದನೆ
Also read  ಕೊಡಗಿನಿಂದ ದೂರ ಸರಿಯುತ್ತಿರುವ ಸಂಬಾರ ರಾಣಿ
Also read  ಮಳೆ,ಕಾಡಾನೆ ಕಾಟಕ್ಕೆ ಕಾಫಿ,ಕರಿಮೆಣಸು,ಭತ್ತ ನಾಶ
Also read  ಗೂಡ್ಸ್ ರೈಲಿಗೆ ಸಿಲುಕಿ ಮರಿಯಾನೆಗಳ ಮರಣ: ಸಾವಿಗೆ ಕಂಬನಿ ಮಿಡಿದ ಹಿಂಡಾನೆಗಳು

Leave a Reply