ಮಲೆನಾಡು ಭಾಗದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ:ಬೆಳೆಗಾರರಲ್ಲಿ ಸಂತಸ

ಕೊಡಗು,ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ– ಕೊಳ್ಳಗಳು ಮೈದುಂಬಿಕೊಳ್ಳುತ್ತಿವೆ.ಬೆಳೆಗಾರ ಸಂತಸ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ವಿವಿಧೆಡೆ ಉತ್ತಮ ಮಳೆಯಾಗಿದೆ.

ಕೊಟ್ಟಿಗೆಹಾರ ಸುತ್ತಮುತ್ತ ಎರಡು ದಿನಗಳಿಂದ ಬಾರಿ ಮಳೆಯಾಗುತ್ತಿದ್ದು, ಭತ್ತದ ಗದ್ದೆಗಳಿಗೆ ನೀರು ತುಂಬಿದ್ದು ರೈತರಲ್ಲಿ ಮಂದಹಾಸ ಮೂಡಿದೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದ ಸಕಲೇಶಪುರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ.

ಕೊಡಗಿನ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮವು ಬಹುತೇಕ ಭರ್ತಿಯಾಗಿದೆ. ಇನ್ನೆರಡು ದಿನ ನಿರಂತರ ಮಳೆಯಾದರೆ ತ್ರಿವೇಣಿ ಸಂಗಮ ಜಲಾವೃತವಾಗಲಿದೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಏರಿಕೆ ಕಂಡಿದೆ. 

ವಿರಾಜಪೇಟೆ, ನಾಪೋಕ್ಲು, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲೂ ಬಿಡುವು ಕೊಟ್ಟು ಮಳೆ ಅಬ್ಬರಿಸುತ್ತಿದೆ.

ಸೋಮವಾರಪೇಟೆ, ಶನಿವಾರಸಂತೆ,ಮಡಿಕೇರಿ, ಮುಕ್ಕೋಡ್ಲು, ಹಟ್ಟಿಹೊಳೆ, ಮಾದಾಪುರ ಭಾಗದಲ್ಲೂ ನಿರಂತರ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವು 432 ಕ್ಯುಸೆಕ್‌ಗೆ ಏರಿಕೆಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಹೆಚ್ಚಿದ ಮಳೆ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ಜು. 6ರಂದು ಶಾಲೆ ಹಾಗೂ ಪಿ.ಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಭೈರಾಪುರ, ಗುತ್ತಿ, ಮೂಲರಹಳ್ಳಿ, ದೇವರುಂದ, ಹೊಸ್ಕೆರೆ, ಮೇಕನಗದ್ದೆ ಭಾಗಗಳಲ್ಲಿ ಮಳೆಯ ಜೊತೆಗೆ ಗಾಳಿಯ ಅಬ್ಬರ ಹೆಚ್ಚಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಘಟ್ಟ ಪ್ರದೇಶ, ಕಳಸ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಹೇಮಾವತಿ, ಭದ್ರಾ, ತುಂಗಾ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ಜಲಪಾತಗಳು ಮೈದುಂಬಿಕೊಳ್ಳುತ್ತಿವೆ. 

ಎರಡು ದಿನ ಸುರಿದ ಮಳೆಗೆ ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಜಂಕ್ಷನ್‌ ಬಳಿ ಹೆದ್ದಾರಿಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ಮತ್ತೆ ಕುಸಿಯುವ ಆತಂಕ ಎದುರಾಗಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಆಗಿದ್ದು, ಮಲಪ್ರಭಾ ನದಿ ದಡದಲ್ಲಿರುವ ಖಾನಾಪುರ ತಾಲೂಕು ಅಸೋಗಾ ರಾಮಲಿಂಗೇಶ್ವರ ದೇಗುಲ ಜಲಾವೃತವಾಗಿದೆ. 

ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜು.10 ರವರೆಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PC:Kodagu Connect (Twitter)

Also read  ರಾಜ್ಯದಲ್ಲಿ ಮುಂದಿನ ಮೂರು ನಾಲ್ಕು ದಿನ ಭಾರಿ ಮಳೆ-ರೆಡ್‌ ಅಲರ್ಟ್‌