ಬೆಟ್ಟದ ಮೇಲಿದೆ ‘ಕಪ್ಪು ಬಂಗಾರ’ದ ತೋಟ

ಅಡಿಕೆ ತೋಟಕ್ಕೆ ಹೊಂದಿಕೊಂಡಿರುವ ಸೊಪ್ಪಿನ ಬೆಟ್ಟದಲ್ಲಿ ‘ಕಪ್ಪು ಬಂಗಾರ’ ಕಾಳು ಮೆಣಸಿನ ಕೃಷಿ. ಅಲ್ಪ ನಿರ್ವಹಣೆ- ಉತ್ತಮ ಇಳುವರಿ. ಬೆಟ್ಟದ ಜಾಗದಲ್ಲೂ ಆದಾಯದ ಬೆಳೆ !

 30 ವರ್ಷಗಳಿಂದ ಕಾಳು ಮೆಣಸು ಬೆಳೆಯುತ್ತಿರುವ ಶ್ರೀಧರ ಭಟ್‌ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ (ಚವತ್ತಿ) ಹೊಸ್ಮನೆಯವರು. 7 ಎಕರೆ ಅಡಿಕೆ ತೋಟದಲ್ಲಿ ಬಾಳೆ, ಕಾಳು ಮೆಣಸಿನ ಬೆಳೆಯಿದೆ. ಲೆಕ್ಕದಲ್ಲಿ ಹೇಳುವುದಾದರೆ ತೋಟದಲ್ಲಿರುವ ಕಾಳು ಮೆಣಸಿನ ಬಳ್ಳಿಗಳ ಸಂಖ್ಯೆ ಒಂದೂವರೆ ಸಾವಿರ. ಕಾಳು ಮೆಣಸಿನ ಕೃಷಿಯನ್ನು ಇನ್ನಷ್ಟು ವಿಸ್ತರಿಸಬೇಕೆಂಬ ವಿಚಾರ ಬಂದಾಗ ನೆನಪಾದದ್ದು ಸೊಪ್ಪಿನ ಬೆಟ್ಟದ ಜಾಗ ಹಾಗೂ ಅಲ್ಲಿರುವ ಮರಗಳು. ತೋಟದ ಅಕ್ಕಪಕ್ಕದ ಬೆಟ್ಟದ ಕಾಡು ಮರಗಳ ಬುಡದಲ್ಲಿ 200 ಕಾಳು ಮೆಣಸಿನ ಬಳ್ಳಿ ನಾಟಿ ಮಾಡಿ 12 ವರ್ಷಗಳು ಕಳೆದಿವೆ. ಇದಲ್ಲದೇ ಮೂರು ವರ್ಷಗಳ ಹಿಂದೆ ನಾಟಿ ಮಾಡಿದ 200 ಬಳ್ಳಿಗಳಿವೆ. ಅಡಿಕೆ ಮರಕ್ಕೆ ಕಾಳು ಮೆಣಸಿನ ಬಳ್ಳಿ ಬೆಳೆಸುವುದು ಸಾಮಾನ್ಯ ಕೃಷಿ ಪದ್ಧತಿ. ಆದರೆ, ಬೆಟ್ಟದ ಮರಗಳೊಂದಿಗೆ ಕೃಷಿ ಮಾಡುತ್ತಿರುವುದು ಇವರ ವಿಶೇಷ.

ಶ್ರೀಧರ ಭಟ್‌ ಅವರಿಗೆ ಕಾಳು ಮೆಣಸಿನ ಕೃಷಿಯಲ್ಲಿ ವಿಶೇಷ ಆಸಕ್ತಿ. ಅಡಿಕೆ ತೋಟದಲ್ಲಿ ಕಾಳು ಮೆಣಸು ಬೆಳೆಯುವುದಕ್ಕಿಂತ ಬೆಟ್ಟದಲ್ಲಿ ಬೆಳೆಯುವುದು ಅನುಕೂಲ ಎಂಬುದು ಅವರ ಅನಿಸಿಕೆ.

‘ಅಡಿಕೆ ತೋಟದಲ್ಲಿ ಇರುವಂತೆ ಸೊಪ್ಪಿನ ಬೆಟ್ಟದಲ್ಲಿ ಬಸಿಗಾಲುವೆ ಮಾಡುವುದು ಬೇಡ. ಕಾರಣ ಬೆಟ್ಟದಲ್ಲಿ ನೀರು ನಿಲ್ಲುವುದಿಲ್ಲ. ಗಾಳಿ, ಬೆಳಕು ಧಾರಾಳವಾಗಿ ಸಿಗುವುದರಿಂದ ಬಳ್ಳಿ ಸದೃಢವಾಗಿ ಬೆಳೆಯುತ್ತವೆ. ತೋಟದಲ್ಲಿ ಸಿಗುವುದಕ್ಕಿಂತ ಹೆಚ್ಚು ಬೆಳಕು ಬೆಟ್ಟದಲ್ಲಿ ಸಿಗುತ್ತದೆ. ಈ ಎಲ್ಲ ಕಾರಣಗಳಿಂದ ಬೆಟ್ಟದಲ್ಲಿ ರೋಗದ ಪ್ರಮಾಣವೂ ಕಡಿಮೆ. ಕಡಿಮೆ ಖರ್ಚಿನಲ್ಲಿ ಉತ್ಪನ್ನ, ಆದಾಯ ಪಡೆಯಬಹುದು’ಎನ್ನುತ್ತಾರೆ ಅವರು.

ಸೂಕ್ತ ನಿರ್ವಹಣೆ ಬೆಟ್ಟದಲ್ಲಿ ನೆಟ್ಟಿರುವ ಕಾಳು ಮೆಣಸಿನ ಬಳ್ಳಿಗಳನ್ನು ಸೂಕ್ತವಾಗಿ ಪೋಷಣೆ ಮಾಡುತ್ತಾರೆ.

  • ಜನವರಿ- ಫೆಬ್ರವರಿ ತಿಂಗಳಿನಲ್ಲಿ ಪ್ರತಿ ಬಳ್ಳಿಗೆ ಸುಮಾರು 8 ಕೆಜಿ ಕೊಟ್ಟಿಗೆ ಗೊಬ್ಬರ ನೀಡುತ್ತಾರೆ.
  • ಏಪ್ರಿಲ್‌-ಮೇ ತಿಂಗಳಿನಲ್ಲಿ ಒಂದು ಕೆಜಿ ಸುಣ್ಣ ಹಾಗೂ ವರ್ಷಕ್ಕೆ ಎರಡು ಬಾರಿ (ಜೂನ್‌ ಹಾಗೂ ಸೆಪ್ಟೆಂಬರ್‌ನಲ್ಲಿ) ರಾಸಾಯನಿಕ ಗೊಬ್ಬರ (14: 6: 24) ನೀಡುತ್ತಾರೆ.
  • ಒಂದು ಬಳ್ಳಿಗೆ ಸುಮಾರು 400 ಗ್ರಾಂ. ರಾಸಾಯನಿಕ ಗೊಬ್ಬರ ನೀಡುತ್ತಾರೆ.
  • ಜೂನ್‌ ಎರಡನೇ ವಾರದಲ್ಲಿ ಬ್ಲಾಟೆಕ್ಸ್‌ನ್ನು ನೀರಿನಲ್ಲಿ ಮಿಶ್ರಣ ಮಾಡಿ ಮೆಣಸಿನ ಕಾಂಡ ಮತ್ತು ಬೇರು ನೆನೆಯುವಷ್ಟು ನೀಡುತ್ತಾರೆ. ಅಂದರೆ, ಈ ಪ್ರಮಾಣ ಒಂದು ಬಳ್ಳಿಗೆ ಸುಮಾರು ಒಂದೂವರೆ ಲೀಟರ್‌.
  • ಜೂನ್‌ ಕೊನೆಯ ವಾರ ಮತ್ತು ಆಗಸ್ಟ್‌ ಮಧ್ಯ ಭಾಗದಲ್ಲಿ ಬೋರ್ಡೋ ದ್ರಾವಣ ಸಿಂಪಡಿಸುತ್ತಾರೆ.
  • ಜತೆಗೆ ವರ್ಷದಲ್ಲಿ ಎರಡು ಬಾರಿ ಪೋಷಕಾಂಶ ನೀಡುತ್ತಾರೆ. ನವೆಂಬರ್‌ನಿಂದ ಮೇ ತಿಂಗಳ ಅಂತ್ಯದ ವರೆಗೆ ಡ್ರಿಪ್‌ ಮೂಲಕ ನೀರು ಹಾಯಿಸುತ್ತಾರೆ.

ಸೊಪ್ಪಿನ ಬೆಟ್ಟದಲ್ಲಿರುವ ಕಾಳು ಮೆಣಸಿನ ಬಳ್ಳಿಗಳಿಗೆ ಸರಿಯಾಗಿ ನೀರು ನೀಡಿದರೆ (6 ವರ್ಷಗಳ ಬಳಿಕ) ಸರಾಸರಿ 3ರಿಂದ 4 ಕೆಜಿ (ಒಣಗಿದ್ದು) ಕಾಳು ಮೆಣಸು ಸಿಗುತ್ತದೆ. ಅಡಿಕೆ ತೋಟದಲ್ಲಿ ಬೆಳೆದ ಬಳ್ಳಿಗಳಿಂದ ಸರಾಸರಿ 1.70 ಕೆಜಿ ಇಳುವರಿ ಬರುತ್ತಿದೆ. ಅಡಿಕೆ ತೋಟದಲ್ಲಿರುವ ಒಂದು ಮೆಣಸಿನ ಬಳ್ಳಿಯಿಂದ 8 ಕೆಜಿ ಹಾಗೂ ಬೆಟ್ಟದಲ್ಲಿರುವ ಒಂದು ಬಳ್ಳಿಯಿಂದ 13 ಕೆಜಿ ಮೆಣಸು ಪಡೆದ ದಾಖಲೆಯಿದೆ’ ಎನ್ನುತ್ತಾರೆ ಅವರು.

ಈಚೆಗೆ ಪ್ರಚಲಿತಕ್ಕೆ ಬಂದ ಬುಶ್‌ ಪೆಪ್ಪರ್‌ ಕೃಷಿಯನ್ನೂ ಅವರು ಕೈಗೊಂಡಿದ್ದಾರೆ. ತಳಿ ನಾಮಕರಣ, ಅಧ್ಯಯನ ಪ್ರಗತಿಪರ ರೈತ ಶ್ರೀಧರ ಭಟ್‌ ಹೇಳುವ ಪ್ರಕಾರ ಅವರ ತೋಟದಲ್ಲಿ ಇರುವ ಕಾಳು ಮೆಣಸಿನ (ಸ್ಥಳೀಯ) ತಳಿಗಳ ಸಂಖ್ಯೆ 21. ಇದರೊಂದಿಗೆ ಫಣಿಯೂರು ತಳಿಯೂ ಇದೆ. ಹಲವು ದಶಕಗಳಿಂದ ಅವರ ತೋಟದಲ್ಲಿರುವ ಸ್ಥಳೀಯ ಕಾಳು ಮೆಣಸಿನ ಬಳ್ಳಿಗಳ ‘ಮೆಣಸಿನ ಕಾಳು’ ಇಳುವರಿ ಉತ್ತಮವಾಗಿದೆ. ರೋಗ ಪ್ರಮಾಣವೂ ತೀರಾ ಕಡಿಮೆ.

ಹಿರಿಯ ವಿಜ್ಞಾನಿ ಡಾ.ವೇಣುಗೋಪಾಲ ಅವರ ಕೂಡ ಸ್ಥಳೀಯ ಕಾಳು ಮೆಣಸಿನ ತಳಿ ಬಳ್ಳಿಗಳನ್ನು ಪರೀಕ್ಷಿಸಿದ್ದಾರೆ. ಇನ್ನೂ ಸ್ಥಳೀಯ ತಳಿಗಳ ಹೆಸರು ಗೊತ್ತಾಗಿಲ್ಲ. ಶ್ರೀಧರ ಭಟ್‌ ಅವರ ತೋಟದಲ್ಲಿರುವ ಸ್ಥಳೀಯ ತಳಿಯ ಕಾಳು ಮೆಣಸಿನ ಗಿಡಗಳ ಪೈಕಿ ಎರಡಕ್ಕೆ ವರ್ಷದ ಹಿಂದೆ ಸೋಂದಾ ಸ್ವರ್ಣವಲ್ಲಿ ಮಠದ ಕೃಷಿ ಜಯಂತಿಯಲ್ಲಿ ನಾಮಕರಣ ಮಾಡಲಾಗಿದೆ. ಅವು ‘ಶ್ರೀ ಸ್ವರ್ಣವಲ್ಲಿ ಶಾಲ್ಮಲಾ’, ‘ಶ್ರೀ ಸ್ವರ್ಣವಲ್ಲಿ ಸೂರ್ಯ’. ಹಲವು ರೈತರಿಗೆ ಈ ತಳಿಯ ಗಿಡಗಳನ್ನು ನೀಡಲಾಗಿದೆ. ಶಿರಸಿಯ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಯೊಬ್ಬರು ಇವರ ತೋಟದಲ್ಲಿರುವ ಸ್ಥಳೀಯ ತಳಿಗಳ ಗುಣಧರ್ಮ, ವಿಶೇಷತೆಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.

Also read  Black Pepper Spot Prices 29-Oct-18
Read previous post:
Uncertainty over Brazil’s imports prompts decline in robusta prices

Robusta coffee futures were trading lower even as Brazil’s Agriculture Minister Blairo Maggi said he has asked the country’s Foreign

Close